ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ನಿಂದ ಕೇಂದ್ರ ಸರ್ಕಾರಕ್ಕೆ ಶುಲ್ಕದ ರೂಪದಲ್ಲಿ ₹ 8,546 ಕೋಟಿ ಲಂಚ: ಆರೋಪ

ಎಐಸಿಸಿ ವಕ್ತಾರೆ ಅಮೀ ಯಾಜ್ಞಿಕ್ ಆರೋಪ
Last Updated 4 ಅಕ್ಟೋಬರ್ 2021, 15:51 IST
ಅಕ್ಷರ ಗಾತ್ರ

ಮಂಗಳೂರು: ‘ಅಮೆರಿಕದ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ಕಾನೂನು ಶುಲ್ಕವಾಗಿ ₹ 8,546 ಕೋಟಿ ಮೊತ್ತವನ್ನು ಕೇಂದ್ರಸರ್ಕಾರಕ್ಕೆ ನೀಡಿದ್ದು, ದೇಶದ ಕಾನೂನು ಸಡಿಲಗೊಳಿಸಲು ಈ ಹಣವನ್ನು ಲಂಚದ ರೂಪದಲ್ಲಿ ನೀಡಿರುವ ಅನುಮಾನವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ತನಿಖೆ ನಡೆಯಬೇಕು’ ಎಂದು ಎಐಸಿಸಿ ವಕ್ತಾರೆ ಅಮೀ ಯಾಜ್ಞಿಕ್ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಷ್ಟು ದೊಡ್ಡ ಮೊತ್ತ ಯಾವ ರಾಜಕಾರಣಿಗಳು, ಅಧಿಕಾರಿಗಳಿಗೆ ಪಾವತಿಯಾಗಿದೆ ಎಂಬುದು ಗೊತ್ತಿಲ್ಲ. ದೇಶದ ಜನರಿಗೆ ಇದನ್ನು ತಿಳಿಯುವ ಹಕ್ಕು ಇದ್ದು, ಪ್ರಧಾನ ಮಂತ್ರಿ ಮೌನ ಮುರಿದು, ಇದಕ್ಕೆ ಉತ್ತರಿಸಬೇಕು’ ಎಂದರು.

‘ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ ಎನ್ನುತ್ತಿದೆ. ಆದರೆ, ದೇಶದಲ್ಲಿ ಸಣ್ಣ ಉದ್ಯಮಗಳು, ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಯುವಜನರು ನಿರುದ್ಯೋಗ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಸ್ವಾತಂತ್ರ್ಯಾನಂತರ 70 ವರ್ಷಗಳಲ್ಲಿ ಮಾಡಿದ್ದ ದೇಶದ ಆಸ್ತಿಯನ್ನು, ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ, ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ದೇಶದ ಆಸ್ತಿ ಸೃಷ್ಟಿಗೆ ನಯಾಪೈಸೆ ಕೊಡುಗೆ ನೀಡದ ಬಿಜೆಪಿ, ಕೇವಲ ಶ್ರೀಮಂತರು, ಬಂಡವಾಳಶಾಹಿಗಳ ಪರವಾಗಿ ಯೋಚಿಸುತ್ತಿದೆ’ ಎಂದು ಆರೋಪಿಸಿದರು.

‘ಒಂದೂವರೆ ವರ್ಷದಲ್ಲಿ ದೇಶದಲ್ಲಿ 14 ಕೋಟಿ ಉದ್ಯೋಗ ನಷ್ಟವಾಗಿದೆ. ಹಿಂಸಾಚಾರ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈವರೆಗೆ ಒಂದೂ ಸುದ್ದಿಗೋಷ್ಠಿ ನಡೆಸದ ಪ್ರಧಾನ ಮಂತ್ರಿ, ‘ಮನ್‌ ಕೀ ಬಾತ್‌’ನಲ್ಲಾದರೂ ಇದಕ್ಕೆ ಉತ್ತರ ನೀಡಬಹುದಿತ್ತು’ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ಕುಮಾರ್, ಮುಖಂಡರಾದ ಪಿ.ವಿ. ಮೋಹನ್, ಸದಾಶಿವ ಉಳ್ಳಾಲ್, ಜೋಕಿಂ ಡಿಸೋಜ, ನೀರಜ್ ಪಾಲ್, ಗಣೇಶ್ ಪೂಜಾರಿ, ಆರಿಫ್ ಬಾವ, ಶುಭೋದಯ ಆಳ್ವ, ಲಾರೆನ್ಸ್ ಡಿಸೋಜ, ಟಿ.ಕೆ. ಸುಧೀರ್, ನಝೀರ್ ಬಜಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT