ಗುರುವಾರ , ಮೇ 28, 2020
27 °C
ಮುನ್ನೆಚ್ಚರಿಕೆ ಕುರಿತು ಚರ್ಚೆ

ಅಂಪನ್‌ ಚಂಡಮಾರುತ: ಬಿಜೆಪಿಯಿಂದ ಸಹಾಯವಾಣಿ ತಂಡ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅಂಪನ್‌ ಚಂಡಮಾರುತದ ಮುಂಜಾಗ್ರತೆ ಕೈಗೊಳ್ಳುವ ಕುರಿತು ಸಂಸದ ನಳಿನ್‌ಕುಮಾರ್ ಕಟೀಲ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ ನಡೆಯಿತು.

ಮಂಗಳವಾರ ದೇಶದ ವಿವಿಧ ಮುಖಂಡರ ಜತೆಗೆ ಚರ್ಚೆ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದ್ದರು. ರಾಜ್ಯದಿಂದ ಸಂಸದ ನಳಿನ್‌ಕುಮಾರ್ ಕಟೀಲ್ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ್ದರು.

ಜೆ.ಪಿ. ನಡ್ಡಾ ಅವರ ಸೂಚನೆಯಂತೆ ಬಿಜೆಪಿ ಶಾಸಕರು, ಪದಾಧಿಕಾರಿಗಳ ಜತೆ ಸಭೆ ನಡೆಸಿದ ನಳಿನ್‌ಕುಮಾರ್ ಕಟೀಲ್‌, ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು.

ತೊಂದರೆಗೆ ಸಿಲುಕುವ ಜನರಿಗೆ ಮಾಹಿತಿ ನೀಡಲು ತುರ್ತಾಗಿ ಕಾಲ್‌ಸೆಂಟರ್ ಆರಂಭಿಸಬೇಕು. ಬರಬಹುದಾದ ಅಪಾಯಗಳು ಹಾಗೂ ಆ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ನಿರ್ವಹಿಸಬೇಕಾದ ಜವಾಬ್ದಾರಿ, ಕೈಗೊಳ್ಳಬೇಕಾದ ಮುನ್ನೆಚರಿಕೆ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಪ್ರಮುಖರ ತಂಡ ರಚಿಸಿ, ಚಂಡಮಾರುತದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು. ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಚಂಡಮಾರುತ ಹಾಗೂ ಮಳೆಗಾಲದ ಮುಂಜಾಗ್ರತಾ ಕ್ರಮಕ್ಕಾಗಿ ಬಿಜೆಪಿ ಸಹಾಯವಾಣಿ ತಂಡ ರಚಿಸಲಾಗಿದೆ. ಗಣೇಶ್ ಹೊಸಬೆಟ್ಟು, ಸಂತೋಷ್ ಕುಮಾರ್ ರೈ, ಈಶ್ವರ ಕಟೀಲ್, ಮನೋಹರ್ ಶೆಟ್ಟಿ ಕದ್ರಿ ಅವರು ಈ ತಂಡದಲ್ಲಿದ್ದಾರೆ. ತುರ್ತು ಸೇವೆಗಾಗಿ ಸಂಸದರ ಕಚೇರಿ (0824- 2448888), ಜಿಲ್ಲಾ ಬಿಜೆಪಿ ಕಚೇರಿ (824- 2444319)ಯನ್ನು ಸಂಪರ್ಕಿಸಲು ಕೋರಲಾಗಿದೆ.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಎಂ., ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ, ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ಕರಾವಳಿ ಭಾಗದ ಮಂಡಲ ಅಧ್ಯಕ್ಷರು ಹಾಗೂ ಪ್ರಮುಖರು ಭಾಗವಹಿಸಿದ್ದರು.

ಪಾಲಿಕೆಯಲ್ಲಿ ಸಭೆ
ಅಂಪನ್ ಚಂಡಮಾರುತ ಮುಖ್ಯವಾಗಿ ನಗರಕ್ಕೆ ಅಪ್ಪಳಿಸುವ ಮುನ್ಸೂಚನೆ ಇರುವುದರಿಂದ ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಬುಧವಾರ ಮುಂಜಾಗ್ರತಾ ಕ್ರಮದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಮೇಯರ್‌ ದಿವಾಕರ ಪಾಂಡೇಶ್ವರ ಸಭೆ ನಡೆಸಿದರು.

ನಗರದಲ್ಲಿ ಪರಿಹಾರ ಕೇಂದ್ರವನ್ನು ಆರಂಭಿಸುವುದು, ಅಗತ್ಯವಾಗಿ ಬೇಕಾದ ಸಲಕರಣೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳುವುದು, ಅಧಿಕಾರಿಗಳ ತಂಡವನ್ನು ರಚಿಸುವುದು, ನಾಲ್ಕು ಇಲಾಖೆಯ ಅಧಿಕಾರಿಗಳು, ರೆಡ್ ಕ್ರಾಸ್ ಸೊಸೈಟಿಯವರನ್ನು ಜತೆಗಿರಿಸಿಕೊಂಡು, ಜಿಲ್ಲಾಡಳಿತದ ಸೂಚನೆಗೆ ಅನುಗುಣವಾಗಿ ಅನುಸರಿಸಬೇಕಾದ ಕ್ರಮಗಳ ಮಾಹಿತಿಯನ್ನು ನೀಡಲಾಯಿತು.

ಉಪ ಮೇಯ್‌ ವೇದಾವತಿ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಉಪ ಆಯುಕ್ತರು, ಸ್ಥಾಯಿ ಸಮಿತಿ ಅಧ್ಯಕ್ಷ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಮೆಸ್ಕಾಂ ಇಲಾಖೆ, ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು