ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಂದು ಅಮೃತ ಭಾರತಿಗೆ ಕನ್ನಡದ ಆರತಿ

Last Updated 17 ಮೇ 2022, 16:26 IST
ಅಕ್ಷರ ಗಾತ್ರ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೇ 28ರಂದು ಮಂಗಳೂರಿನ ಪುರಭವನ, ಸುಳ್ಯ ತಾಲ್ಲೂಕಿನ ಅಮರ ಸುಳ್ಯ ಹಾಗೂ ಉಳ್ಳಾಲ ತಾಲ್ಲೂಕಿನ ಉಳ್ಳಾಲದಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’ ಅಡಿಯಲ್ಲಿ ದೇಶಭಕ್ತಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮದ ಆಯೋಜನೆ ಕುರಿತಂತೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಮೇ 28ರಂದು ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ದೇಶಭಕ್ತಿ ಸಾರುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ಕಿರುಚಿತ್ರಗಳ ವೀಕ್ಷಣೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಬಂಧಿಸಿದ ತಾಲ್ಲೂಕುಗಳ ಅಧಿಕಾರಿಗಳು ಹಾಗೂ ಸಂಘ –ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರ ಸಹಕಾರ ಅಗತ್ಯ. ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರ ಬಲಿದಾನವಾಗಿದೆ. ಸಾಕಷ್ಟು ಯಶೋಗಾಥೆಗಳಿವೆ. ಅವುಗಳಲ್ಲಿ ಇನ್ನೂ ಕೆಲವು ಇತಿಹಾಸದ ಪುಟ ಸೇರಿಲ್ಲ. ಅಂತಹವುಗಳನ್ನು ಜಿಲ್ಲೆಯ ಯುವಜನರಿಗೆ ತಿಳಿಸಲಾಗುವುದು ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದ ಪ್ರಮುಖ 75 ಸ್ಥಳಗಳನ್ನು ಗುರುತಿಸಿ, ಆ ಬಗ್ಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಮೇ 28ರಂದು ಸಾವರ್ಕರ್ ಜಯಂತಿಯನ್ನು ಕೇಂದ್ರವಾಗಿಟ್ಟುಕೊಂಡು, ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಜುಲೈ 1ರಿಂದ 15ರವರೆಗೆ ‘ಹೋರಾಟದ ನೆಲದಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಪ್ರಮುಖ ಹೋರಾಟ ನಡೆದ ರಾಜ್ಯದ ಈಸೂರು, ಸುರಪುರ, ಅಮರಸುಳ್ಯ, ವಿದುರಾಶ್ವತ್ಥ, ಕಿತ್ತೂರು, ನಂದಗಡ ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ ಕಿರು ಪ್ರವಾಸ ಮಾದರಿಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೋಗುವಂತಹ ಕಾರ್ಯಕ್ರಮ ಇದಾಗಿದೆ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‍ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ರೇವಣಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಇದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿದರು.

‘ನಾಲ್ಕು ಕಡೆ ರಥಯಾತ್ರೆ’

ಆಗಸ್ಟ್ 1ರಿಂದ 8ರವರೆಗೆ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಕಲಬುರಗಿಯ ಜಿಲ್ಲಾ ಕೇಂದ್ರದಿಂದ ಹೊರಡುವ ರಥಯಾತ್ರೆ ರಾಜಧಾನಿಯನ್ನು ತಲುಪುತ್ತದೆ. ಆಗಸ್ಟ್ 9ರಿಂದ ಮೂರು ದಿನ ಎಲ್ಲರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ತಿಳಿಸಲಾಗುವುದು ಎಂದು ಸಚಿವ ಸುನಿಲ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT