ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೋಮೇಶ್ವರ ನಿರ್ದೇಶನದಲ್ಲಿ ತಯಾರಾದ ‘ಅನರ್‌ಕಲಿ’ ತುಳು ಸಿನಿಮಾವು ಆ.23ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ಕಿಶೋರ್ ಡಿ. ಶೆಟ್ಟಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಸಿನಿಮಾದ ಪ್ರೀಮಿಯರ್ ಶೋ ನಡೆಸಲಾಗಿದೆ. ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿರುವುದು ಚಿತ್ರ ತಂಡಕ್ಕೆ ಖುಷಿ ನೀಡಿದೆ’ ಎಂದರು.
ನಟ ಶೋಭರಾಜ್ ಪಾವೂರು ಮಾತನಾಡಿ, ಇದೊಂದು ಪರಿಶುದ್ಧ ತುಳು ಸಿನಿಮಾ. ಸಿನಿಮಾ ನೋಡಿದ ಮೇಲೆ ಎರಡು ದಿನಗಳಾದರೂ ನಿಮ್ಮನ್ನು ಕಾಡುತ್ತದೆ’ ಎಂದರು.
ಹರ್ಷಿತ್ ಸೋಮೇಶ್ವರ ಮಾತನಾಡಿ, ‘ಸಿನಿಮಾದಲ್ಲಿ 2 ಗಂಟೆ 10 ನಿಮಿಷಗಳ ಕಾಲ ನಿಮ್ಮನ್ನು ರಂಜಿಸಲು ಏನೆಲ್ಲ ಅಗತ್ಯವೋ ಅದೆಲ್ಲವನ್ನೂ ತೋರಿಸಿದ್ದೇವೆ. ತುಳು ಸಿನಿಮಾ ವೀಕ್ಷಿಸಿ ನಮ್ಮ ತಂಡವನ್ನು ಗೆಲ್ಲಿಸಬೇಕು’ ಎಂದರು.
ಪೊಳಲಿ, ಕಟೀಲು, ಸೋಮೇಶ್ವರ, ಉಳ್ಳಾಲ, ಉಳಿಯ, ನೀರುಮಾರ್ಗ, ಹಾಗೂ ಕಳಸದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತಾ ಶಕ್ತಿನಗರ, ನಮಿತಾ ಕುಳೂರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ನಟಿ ಆರ್.ಜೆ. ಮಧುರಾ, ಅರುಣ್ ರೈ ಪುತ್ತೂರು, ವಾತ್ಸಲ್ಯ, ಲಂಚುಲಾಲ್, ರಜನೀಶ್ ಕೋಟ್ಯಾನ್, ರೋಹಿತ್, ಮೋಹನ್ ಕೊಪ್ಪಲ ಮತ್ತಿತರರು ಇದ್ದರು.