ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಸಲಹೆಯಂತೆ ಉತ್ತರಿಸಿದ ನಿರೂಪಕಿ

ಕಿಶೋರ್, ಅಕೀಲ್‌ ನ್ಯಾಯಾಂಗ ಬಂಧನಕ್ಕೆ ಕಾಯ್ದರೆ ಅನುಶ್ರೀ?
Last Updated 27 ಸೆಪ್ಟೆಂಬರ್ 2020, 2:52 IST
ಅಕ್ಷರ ಗಾತ್ರ

ಮಂಗಳೂರು: ಪೊಲೀಸರು ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಶುಕ್ರವಾರವೇ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದ ನಿರೂಪಕಿ, ನಟಿ ಅನುಶ್ರೀ, ಶನಿವಾರ ಬೆಳಿಗ್ಗೆ ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು.

ತಮ್ಮ ಫೇಸ್‌ಬುಕ್‌ನಲ್ಲಿ ಶುಕ್ರವಾರವೇ ಹಾಜರಾಗುತ್ತೇನೆ ಎಂದಿದ್ದ ಅವರು, ಅದಕ್ಕೆ ಪೂರಕವಾಗಿ ಬೆಳಿಗ್ಗೆ 5 ಗಂಟೆಗೆ ಕಾರಿನಲ್ಲಿ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ಸಂಜೆಯವರೆಗೂ ಅನುಶ್ರೀ ಪೊಲೀಸರು ಎದುರು ಬರಲಿಲ್ಲ. ಆದರೆ, ಸಂಜೆಯ ವೇಳೆಗೆ ಠಾಣೆಗೆ ಬಂದರಾದರೂ, ಪೊಲೀಸರು ವಿಚಾರಣೆ ನಡೆಸಲು ನಿರಾಕರಿಸಿದರು.

ಶುಕ್ರವಾರ ಬೆಳಿಗ್ಗೆಯಿಂದಲೇ ಮಾಧ್ಯಮಗಳಲ್ಲಿ ಅನುಶ್ರೀ ವಿಚಾರಣೆಗೆ ಸಂಬಂಧಿಸಿದಂತೆ ಸುದ್ದಿಗಳು ಪ್ರಸಾರವಾಗಿದ್ದು, ಈಗಾಗಲೇ ಬಂಧಿತರಾಗಿರುವ ಕಿಶೋರ್‌, ಅಕೀಲ್‌, ತರುಣ್‌ ಹಾಗೂ ಆಸ್ಕಾ ಅವರ ಎದುರಿನಲ್ಲಿಯೇ ಅನುಶ್ರೀ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಬಂದಿತ್ತು. ಇದರಿಂದಾಗಿ ಅನುಶ್ರೀ ಶುಕ್ರವಾರ ಬೆಳಿಗ್ಗೆ ವಿಚಾರಣೆಯಿಂದ ಹಿಂದೆ ಸರಿದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಮಧ್ಯಾಹ್ನದ ನಂತರ ಪೊಲೀಸರು ಕಿಶೋರ್‌ ಶೆಟ್ಟಿ ಹಾಗೂ ಅಕೀಲ್‌ ನೌಶೀಲ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ಟೋಬರ್‌ 9 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಾದ ನಂತರವೇ ಅನುಶ್ರೀ ಪೊಲೀಸ್‌ ಠಾಣೆಗೆ ಬಂದಿದ್ದರು ಎನ್ನಲಾಗಿದೆ.

ಆದರೆ, ತರುಣ್‌ ರಾಜ್‌ ಹಾಗೂ ಕಿಶೋರ್‌ ಶೆಟ್ಟಿ ಗೆಳತಿ ಆಸ್ಕಾ ಈಗಲೂ ಪೊಲೀಸ್‌ ಕಸ್ಟಡಿಯಲ್ಲಿಯೇ ಇದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಅದಕ್ಕಾಗಿಯೇ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಇಲ್ಲದ ಹಾಗೂ ನಗರದ ಹೊರವಲಯದಲ್ಲಿರುವ ಪಣಂಬೂರು ಉತ್ತರ ವಲಯ ಎಸಿಪಿ ಕಚೇರಿಯಲ್ಲಿ ಅನುಶ್ರೀ ವಿಚಾರಣೆ ಎದುರಿಸಿದರು ಎನ್ನಲಾಗುತ್ತಿದೆ.

ವಕೀಲರ ಜೊತೆ ಸಮಾಲೋಚನೆ: ಮಂಗಳೂರು ಸಿಸಿಬಿ ಪೊಲೀಸರ ನೋಟಿಸ್‌ ಜಾರಿಯಾಗುತ್ತಲೇ ಅನುಶ್ರೀ ತಮ್ಮ ವಕೀಲರ ಜೊತೆಗೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ. ವಕೀಲರ ಸೂಚನೆಯಂತೆ ಮಂಗಳೂರು ಪೊಲೀಸರ ವಿಚಾರಣೆಗೆ ಹಾಜರಾಗುವುದಾಗಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ಈ ವೇಳೆ ವಕೀಲರೂ ಸಾಕಷ್ಟು ಸಲಹೆಗಳನ್ನು ನೀಡಿದ್ದು, ಯಾವ ವಿಷಯಕ್ಕೆ ಸಂಬಂಧಿಸಿದಂತೆ ಎಷ್ಟು ಉತ್ತರ ನೀಡಬೇಕು ಎನ್ನುವ ಬಗ್ಗೆಯೂ ಅನುಶ್ರೀಗೆ ಸೂಚನೆ ನೀಡಿದ್ದರು. ಶನಿವಾರದ ವೇಳೆ ವಕೀಲರ ಸೂಚನೆಯಂತೆಯೇ ಅನುಶ್ರೀ ಉತ್ತರಿಸಿದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ವಿಚಾರಣೆ ಸ್ಥಳ ಬದಲಾವಣೆ

ಮಾಧ್ಯಮಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅನುಶ್ರೀ ತಮ್ಮ ವಿಚಾರಣೆ ಸ್ಥಳವನ್ನು ಬದಲಾಯಿಸಿಕೊಂಡಿದ್ದರು. ಶುಕ್ರವಾರ ನಗರದ ಪಾಂಡೇಶ್ವರ ನಾರ್ಕೊಟಿಕ್‌ ಆಂಡ ಎಕನಾಮಿಕ್ಸ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಶನಿವಾರವೂ ಅಲ್ಲಿಯೇ ವಿಚಾರಣೆ ನಡೆದರೆ ಕಷ್ಟವಾಗಬಹುದು ಎಂದು ವಿಚಾರಣೆಯ ಸ್ಥಳವನ್ನು ಬದಲಾಯಿಸಿದರು.

ಶನಿವಾರ ಬೆಳಿಗ್ಗೆ 9 ಗಂಟೆಗೆ ಅನುಶ್ರೀ ವಿಚಾರಣೆಗಾಗಿ ಪಣಂಬೂರಿನ ಉತ್ತರ ವಲಯ ಎಸಿಪಿ ಕಚೇರಿಗೆ ಬಂದಿದ್ದರು. ವಿಚಾರಣೆ ಪೂರ್ಣವಾದ ನಂತರ ಹೊರಗಡೆ ಕಾಯುತ್ತಿದ್ದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT