ಭಾನುವಾರ, ನವೆಂಬರ್ 27, 2022
26 °C

ಆನೆಕೆರೆ ಚತುರ್ಮುಖ ಬಸದಿ ಜೀರ್ಣೋದ್ಧಾರ: ಎಂ.ಎನ್. ರಾಜೇಂದ್ರ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉಡುಪಿ ಜಿಲ್ಲೆ ಕಾರ್ಕಳದ ಆನೆಕೆರೆಯ ನಡುವೆ ಇರುವ ಚತುರ್ಮುಖ ಬಸದಿಯ ಜೀರ್ಣೋದ್ಧಾರ ಕಾರ್ಯ ಬರುವ ಫೆಬ್ರುವರಿಯೊಳಗೆ ಪೂರ್ಣಗೊಳ್ಳಲಿದ್ದು, ಮಾರ್ಚ್ ವೇಳೆಗೆ ಪುನರ್ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಕಳ ಆನೆಕೆರೆ ಚತುರ್ಮುಖ ಕೆರೆಬಸದಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಾರು ₹ 2.72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸದಿಗೆ ಸ್ಥಳೀಯ ಶಾಸಕ ಸುನಿಲ್‌ಕುಮಾರ್ ಮುತುವರ್ಜಿಯಿಂದ ₹ 50 ಲಕ್ಷ ಸರ್ಕಾರದಿಂದ ದೊರೆತಿದೆ. ಬಸದಿಯ ಆವರಣಗೋಡೆಯ ಹೊರಗೆ ₹ 1.50 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ’ ಎಂದರು.

ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕೆ. ಗುಣಪಾಲ ಕಡಂಬ ಮಾತನಾಡಿ, ‘ಕೆರೆ ಮಧ್ಯಭಾಗದಲ್ಲಿರುವ ಬಸದಿ ಇಡೀ ದೇಶದಲ್ಲೇ ನೋಡಲು ಸಿಗುವುದು ಅಪರೂಪ. ಈ ಕ್ಷೇತ್ರವನ್ನು ಧಾರ್ಮಿಕ ಆಕರ್ಷಣೆಯ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ದಾನಿಗಳು ನೆರವು ನೀಡಬೇಕು’ ಎಂದರು.

ಆನೆಗಳಿಗೆ ನೀರು ಕುಡಿಯಲು 26 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿದ್ದ ಕೆರೆಯಲ್ಲಿ ಭೈರವರಸರ ವಂಶಸ್ಥ ಪಾಂಡ್ಯನಾಥ ಪಾಂಡಪ್ಪೋಡೆಯ ಈ ಬಸದಿ ನಿರ್ಮಿಸಿದರು. ಕೆರೆ ಬಸದಿಯಲ್ಲಿ ಆದಿನಾಥ ಸ್ವಾಮಿ, ಚಂದ್ರನಾಥ ಸ್ವಾಮಿ, ಶಾಂತಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಚಕ್ರೇಶ್ವರಿ ದೇವಿ, ಮೇಗಿನ ನೆಲೆಯಲ್ಲಿ ಪಾರ್ಶ್ವನಾಥ ಸ್ವಾಮಿ, ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಹೆಗ್ಡೆ, ಸಂಚಾಲಕ ನೇಮಿರಾಜ ಆರಿಗ, ಮೊಕ್ತೇಸರ ಉದಯ ಕಡಂಬ, ಪ್ರಮುಖರಾದ ವೈ. ಸೂರಜ್‌ಕುಮಾರ್ ಪಟ್ನಶೆಟ್ಟಿ, ಪುಷ್ಪರಾಜ್ ಜೈನ್, ಎಂ.ಕೆ. ಸುವೃತ್‌ ಕುಮಾರ್, ವೃಷಭರಾಜ್ ಕಡಂಬ, ಶ್ರೀವರ್ಮ ಜೈನ್, ಮಹೇಂದ್ರವರ್ಮ ಜೈನ್, ಭರತರಾಜ್ ಜೈನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು