ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ಸಿದ್ಧ

ಅರೆಭಾಷೆ ಅಕಾಡೆಮಿ ನೇತೃತ್ವ; ಭಾಗವತ ಭವ್ಯಶ್ರೀ ಕುಲ್ಕುಂದ ರಚನೆ
Last Updated 21 ಸೆಪ್ಟೆಂಬರ್ 2020, 16:57 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಪ್ರಾದೇಶಿಕ ಉಪಭಾಷೆಯಾದ ಅರೆಭಾಷೆಯಲ್ಲಿ ಇದೇ ಮೊದಲ ಬಾರಿಗೆ ಛಂದೋಬದ್ಧ ಯಕ್ಷಗಾನ ಪ್ರಸಂಗ ರಚನೆಗೊಂಡಿದ್ದು, ತಾಳಮದ್ದಳೆಯ ಮೊದಲ ಪ್ರಯೋಗ ಯಶಸ್ವಿಯಾಗಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮನವಿಯಂತೆ ಯುವ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಅರೆಭಾಷೆಯಲ್ಲಿ ಯಕ್ಷಗಾನ,ತಾಳಮದ್ದಳೆ ಪ್ರಯೋಗ ಈಗಾಗಲೇ ನಡೆದಿದೆ. ಆದರೆ, ಪ್ರಸಂಗ ಸಾಹಿತ್ಯ ಕನ್ನಡದಲ್ಲಿದೆ. ಅರೆಭಾಷೆಯಲ್ಲೇ ಪ್ರಸಂಗ ಸಾಹಿತ್ಯವೂ ದೊರೆಯಬೇಕು ಎಂಬ ಅಕಾಡೆಮಿಯ ಯೋಜನೆಯಂತೆ ಭವ್ಯಶ್ರೀ ಅವರು, ಕನ್ನಡದಿಂದ ಐದು ಪ್ರಸಂಗಗಳನ್ನು ಅರೆಭಾಷೆಗೆ ಅನುವಾದಿಸುತ್ತಿದ್ದಾರೆ. ಈಗಾಗಲೇ ‘ಶರಸೇತು ಬಂಧನ’ ಮತ್ತು ‘ಪಂಚವಟಿ’ ಪ್ರಸಂಗದ ಅನುವಾದ ಪೂರ್ಣಗೊಂಡಿದೆ. ಈ ಪೈಕಿ ‘ಶರಸೇತು ಬಂಧನ’ ಪ್ರಸಂಗ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆ ವಿಡಿಯೊ, ಆಡಿಯೊ ರೆಕಾರ್ಡಿಂಗ್ ನಡೆದಿದೆ.

‘ಅರೆಭಾಷೆಯಲ್ಲಿ ಯಕ್ಷಗಾನ ಪ್ರಸಂಗ ರಚಿಸಬೇಕು ಎಂಬ ಪ್ರಯತ್ನಕ್ಕೆ ಮುಂದಾದಾಗ ಬರೆಯುವವರು ಯಾರು ಎಂಬ ಪ್ರಶ್ನೆ ಎದುರಾಯಿತು. ಅರೆಭಾಷೆ ತಿಳಿದಿರುವವರಿಗೆ ಯಕ್ಷಗಾನ ಛಂದಸ್ಸು ತಿಳಿದಿರಲಿಲ್ಲ. ಛಂದಸ್ಸು ಅರಿತವರಿಗೆ ಭಾಷೆ ಸಮಸ್ಯೆ. ಛಂದೋಬದ್ಧವಾಗಿ ಕನ್ನಡ ಪದ್ಯ ರಚಿಸುತ್ತಿರುವ ಭಾಗವತರಾದ ಭವ್ಯಶ್ರೀ ಅವರಿಗೆ ಅರೆಭಾಷೆಗೆ ಯಕ್ಷಗಾನ ಪ್ರಸಂಗ ಅನುವಾದಿಸಲು ವಿನಂತಿಸಲಾಯಿತು. ಆರಂಭದಲ್ಲಿ ಹಿಂಜರಿದರೂ, ಬಳಿಕ ಹೊಸ ಪ್ರಯೋಗಕ್ಕೆ ಕೈಜೋಡಿಸಿದ್ದಾರೆ’ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.

‘ಅರೆಭಾಷೆಯಲ್ಲಿ ಪದ್ಯ ರಚನೆ ಸಂದರ್ಭ ನನ್ನ ಮೊದಲ ಗುರುಗಳಾದ ವಿಶ್ವವಿನೋದ ಬನಾರಿ ಅವರು ಪ್ರೋತ್ಸಾಹ ನೀಡಿದ್ದಾರೆ. ಗುರುಗಳಾದ ಗಣೇಶ ಕೊಲೆಕಾಡಿ ಅವರು ಛಂದಸ್ಸಿನ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಭಾಗವತರಾದ ಸುಬ್ರಾಯ ಸಂಪಾಜೆ ಭಾಷೆ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸದಸ್ಯರು, ಜಬ್ಬಾರ್ ಸಮೊ ಅವರು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಭವ್ಯಶ್ರಿ ಕುಲ್ಕುಂದ.

ಯೂಟ್ಯೂಬ್‌ನಲ್ಲಿ ಶೀಘ್ರ ಲಭ್ಯ

‘ಶರಸೇತು ಬಂಧನ’ ಪ್ರಸಂಗ ಅರೆಭಾಷೆಯಲ್ಲಿ ‘ಬಾಣದ ಪಾಲ’ ಹೆಸರಿನಲ್ಲಿ ತಾಳಮದ್ದಳೆಯಾಗಿ ಈಗಾಗಲೇ ರೆಕಾರ್ಡಿಂಗ್ ಆಗಿದೆ. ಭಾಗವತಿಕೆಯಲ್ಲಿ ಭವ್ಯಶ್ರೀ ಕುಲ್ಕುಂದ, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ಅಕ್ಷಯ್ ರಾವ್ ವಿಟ್ಲ, ಅರ್ಥಧಾರಿಗಳಾಗಿ ಕೊಳ್ತಿಗೆ ನಾರಾಯಣ ಗೌಡ, ಜಬ್ಬಾರ್ ಸಮೊ ಸಂಪಾಜೆ, ಜಯಾನಂದ ಸಂಪಾಜೆ ಭಾಗವಹಿಸಿದ್ದಾರೆ.

ಅರೆಭಾಷೆಯಲ್ಲಿ ಎರಡು ಪ್ರಸಂಗ ರಚನೆಗೊಂಡಿವೆ. ರೆಕಾರ್ಡಿಂಗ್ ಆದ ತಾಳಮದ್ದಳೆಯನ್ನು ಸದ್ಯದಲ್ಲೇ ಅಕಾಡೆಮಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಮುಂದೆ ಐದು ಪ್ರಸಂಗಗಳು ಅರೆಭಾಷೆಯಲ್ಲಿ ಲಭ್ಯವಾಗಲಿವೆ ಎಂದು ಪ್ರೊ.ಲಕ್ಷ್ಮಿನಾರಾಯಣ ಕಜೆಗದ್ದೆ ತಿಳಿಸಿದ್ದಾರೆ.

***

ಭವ್ಯಶ್ರೀ ಅವರು ಅರೆಭಾಷೆಯಲ್ಲಿ ಪ್ರಸಂಗ ರಚಿಸಬಹುದು ಎಂದು ಅಕಾಡೆಮಿಗೆ ಸಲಹೆ ನೀಡಿದ್ದೆ. ಈ ಪ್ರಯತ್ನ ಅರೆಭಾಷೆಗೆ ಕೊಡುಗೆ ಆಗುತ್ತದೆ.
-ಸುಬ್ರಾಯ ಸಂಪಾಜೆ, ಯಕ್ಷಗಾನ ಭಾಗವತರು

**

ಸವಾಲಿನ ಕೆಲಸವಾದ ಪ್ರಸಂಗ ಅನುವಾದವನ್ನು ಲಾಕ್‌ಡೌನ್ ಅವಧಿಯಲ್ಲಿ ಆರಂಭಿಸಿದೆ. ಅಕಾಡೆಮಿ ನೇತೃತ್ವದಲ್ಲಿ ಹೊಸ ಪ್ರಯೋಗಕ್ಕೆ ಕೈಜೋಡಿಸಿದ ಖುಷಿ ಇದೆ.
-ಭವ್ಯಶ್ರೀ ಕುಲ್ಕುಂದ, ಯಕ್ಷಗಾನ ಭಾಗವತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT