ಗುರುವಾರ , ಅಕ್ಟೋಬರ್ 29, 2020
20 °C

ಕೊಡ್ಯಡ್ಕದಲ್ಲಿ ಅಡಿಕೆ ಸಸಿಗಳಿಗೆ ವಿಚಿತ್ರ ಕಾಯಿಲೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೂಡಬಿದಿರೆ: ಅಡಿಕೆ ತೋಟಕ್ಕೆ ಕೊಳೆರೋಗ ತಗಲಿ, ಸಸಿಗಳ ಸೋಗೆ ಹಳದಿ ಬಣ್ಣಕ್ಕೆ ತಿರುಗಿ, ಸುಟ್ಟ ಹೋದಂತೆ ಕಂಡುಬಂದು ಸಸಿಗಳು ಸಾಯುತ್ತಿವೆ. ಪುತ್ತಿಗೆ ಗ್ರಾಮದ ತೋಟಗಳಲ್ಲಿ ಕಾಣಿಸಿದ ವಿಚಿತ್ರ ರೋಗ ಇದು.

ಕೊಡ್ಯಡ್ಕ ಮಿತ್ತಬೈಲ್‌ನ ಆಗಸ್ಟಿನ್ ಪಿಂಟೋ, ಸಮೀಪದ ಗೋವರ್ಧನ ನಾಯಕ್, ಮೈಕಲ್ ಡಿಸೋಜ ಮೊದಲಾದವರ ತೋಟಗಳಲ್ಲಿ ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡು ಗಿಡಗಳು ನೆಲಕ್ಕುರುಳುತ್ತಿವೆ. ಕೆಲವೆಡೆ ದೊಡ್ಡ ಮರಗಳಲ್ಲೂ ಈ ರೋಗ ಕಾಣಿಸಿಕೊಂಡಿದ್ದು ಪರಿಸರದ ಕೃಷಿಕರನ್ನು ಆತಂಕಕ್ಕೀಡು ಮಾಡಿದೆ.

ಆಗಸ್ಟಿನ್ ಅವರ ತೋಟದಲ್ಲಿದ್ದ ಸುಮಾರು 400 ಗಿಡಗಳ ಪೈಕಿ ಈಗಾಗಲೇ 40 ಗಿಡಗಳು ವಿಚಿತ್ರ ರೋಗದಿಂದ ನಾಶವಾಗಿವೆ. ‘ಗಿಡದ ಕಾಂಡ ಕೊಳೆತು ಹೋಗಿದೆ. ಆದರೆ, ನೆಲದಲ್ಲಿರುವ ಬುಡ ಗಟ್ಟಿಯಾಗಿರುವಂತೆ ಕಾಣುತ್ತಿದೆ’ ಎಂದು ಕೃಷಿಕ ಆಗಸ್ಟಿನ್ ಪಿಂಟೊ ತಿಳಿಸಿದರು.

ಈಚೆಗೆ ಸುರಿದ ಭಾರಿ ಮಳೆಯಿಂದ ಈ ರೋಗ ಕಂಡುಬಂದಿದ್ದು, ಈಗ ಜೋರಾದ ಬಿಸಿಲು ಕಾಯುತ್ತಿರುವ ವೇಳೆ ಇನ್ನಷ್ಟು ವ್ಯಾಪಕವಾಗಿ ಹರಡುತ್ತಿದೆ. ಹತ್ತಿರದ ತೆಂಗು, ಬಾಳೆಗಿಡಗಳಿಗೂ ವ್ಯಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಮಾಹಿತಿ ನೀಡಿದ್ದಾರೆ.

ಅವರು ಈಗಾಗಲೇ ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮಂಗಳೂರು ತಾಲ್ಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಶನಿವಾರ ಭೇಟಿ ನೀಡಲಿದ್ದಾರೆ’ ಎಂದು ತಿಳಿಸಿದ್ದಾರೆ.

‌ದರೆಗುಡ್ಡೆ ಪರಿಸರದ ತೋಟಗಳಲ್ಲೂ ಈ ರೋಗ ಕಾಣಿಸಿಕೊಂಡಿರುವುದಾಗಿ ಅಲ್ಲಿನ ಕೃಷಿಕರು ತಿಳಿಸಿದ್ದಾರೆ. ಬೆನ್ನಿ ಲೋಬೋ ಅವರ ತೋಟದ ದೊಡ್ಡ ಮರಗಳಲ್ಲಿ ಸೋಗೆ ಹಳದಿ ವರ್ಣಕ್ಕೆ ತಿರುಗಿ ಅವಧಿಗೆ ಮೊದಲೇ ಬೀಳುವ ಅಪಾಯ ಇದೆ ಎಂದು ಸ್ಥಳಿಯ ರೈತರು ಭೀತಿ ವ್ಯಕ್ತಪಡಿಸಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು