ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಹಳದಿ ರೋಗ: ಶೀಘ್ರ ತಜ್ಞರ ಸಭೆ

ಕ್ಯಾಂಪ್ಕೊ ಮಹಾಸಭೆಯಲ್ಲಿ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ
Last Updated 24 ಸೆಪ್ಟೆಂಬರ್ 2022, 15:26 IST
ಅಕ್ಷರ ಗಾತ್ರ

ಮಂಗಳೂರು: ‘ರೈತರನ್ನು ಕಂಗೆಡಿಸಿರುವ ಅಡಿಕೆ ಹಳದಿ ಎಲೆ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಕ್ಯಾಂಪ್ಕೊ ಒಂದು ತಿಂಗಳಲ್ಲಿ ಬೆಳೆಗಾರರು ಹಾಗೂ ತಜ್ಞರ ಸಭೆ ಕರೆದು ಚರ್ಚಿಸಲಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಹೇಳಿದರು.

ಶನಿವಾರ ಇಲ್ಲಿ ನಡೆದ ಕ್ಯಾಂಪ್ಕೊ ಸಂಸ್ಥೆಯ 48ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಿಸುತ್ತಿರುವ ಹಳದಿ ಎಲೆ ರೋಗಕ್ಕೆ ಪರಿಹಾರ ಕಂಡಕೊಳ್ಳಲು ಕ್ಯಾಂಪ್ಕೊ ಗಂಭೀರ ಪ್ರಯತ್ನ ನಡೆಸಿದೆ. ಕ್ಯಾಂಪ್ಕೊದ ಸಂಶೋಧನಾ ಪ್ರತಿಷ್ಠಾನದ ಮೂಲಕ ಸಂಶೋಧನೆಗೆ ನೆರವು ನೀಡಲಾಗುವುದು. ಬೈಲಾ ಪ್ರಕಾರ ಸಂಶೋಧನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲದಿದ್ದರೂ, ಬೆಳೆಗಾರರ ಹಿತದೃಷ್ಟಿಯಿಂದ ಈ ವರ್ಷ ₹3.97 ಕೋಟಿ ಮೊತ್ತವನ್ನು ಸಂಶೋಧನೆಗೆ ಮೀಸಲಿಡಲಾಗಿದೆ. ರಾಜ್ಯ ಸರ್ಕಾರದಿಂದ ಹಳದಿ ರೋಗ ನಿರ್ಮೂಲನಾ ಸಂಶೋಧನೆಗೆ ಬಿಡುಗಡೆಯಾದ ₹25 ಕೋಟಿ ಮೊತ್ತದಲ್ಲಿ ₹21 ಕೋಟಿ, ಬಳಕೆಯಾಗದೆ ಬಾಕಿ ಉಳಿದಿದೆ ಎಂದರು.

₹63.60 ಕೋಟಿ ನಿವ್ವಳ ಲಾಭ: ಕಳೆದ ಸಾಲಿನಲ್ಲಿ ಕ್ಯಾಂಪ್ಕೊ ₹2,778.39 ಕೋಟಿ ವ್ಯವಹಾರ ನಡೆಸಿದ್ದು, ₹‌63.60 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 15ರಷ್ಟು ಡಿವಿಡೆಂಡ್ ವಿತರಿಸಲು ನಿರ್ಧರಿಸಿದೆ. 7,500 ಕೆ.ಜಿ. ಮಿತಿಗೆ ಒಳಪಟ್ಟು ಅಡಿಕೆ ಖರೀದಿಯ ಮೇಲೆ ಕೆ.ಜಿ.ಗೆ ಒಂದು ರೂಪಾಯಿ ಪ್ರೋತ್ಸಾಹಧನ, ಕೋಕೊ ಹಸಿ ಮತ್ತು ಒಣ ಬೀನ್ಸ್‌ಗಳ ಕೆ.ಜಿ.ಗೆ ಕ್ರಮವಾಗಿ ₹ 1.50 ಮತ್ತು ₹4 ಪ್ರೋತ್ಸಾಹಧನ ನೀಡಲು ನಿರ್ಣಯಿಸಲಾಗಿದೆ ಎಂದು ಕೊಡ್ಗಿ ತಿಳಿಸಿದರು.

ಕಳೆದ ಸಾಲಿನಲ್ಲಿ ಸಂಸ್ಥೆಯು ₹2292.03 ಕೋಟಿ ಮೌಲ್ಯದ 51,784.38 ಟನ್ ಅಡಿಕೆ ಖರೀದಿಸಿದೆ. ಒಟ್ಟು ₹2,362.06 ಕೋಟಿ ಮೌಲ್ಯದ 51,623.86 ಟನ್ ಅಡಿಕೆ ಮಾರಾಟ ಮಾಡಿದೆ. ₹16.90 ಕೋಟಿ ಮೌಲ್ಯದ 2,943.98 ಟನ್ ಕೋಕೊ ಹಸಿ ಬೀಜ, ₹86.85 ಕೋಟಿ ಮೌಲ್ಯದ 4,458.98 ಟನ್ ಒಣಬೀಜ ಖರೀದಿಸಿದೆ. ಚಾಕೊಲೇಟ್ ಕಾರ್ಖಾನೆಯ ಒಟ್ಟು ಉತ್ಪಾದನೆ 13,791.13 ಟನ್‍ಗೆ ತಲುಪಿದೆ. ಇದರಲ್ಲಿ 12,181.76 ಟನ್ ನಮ್ಮದೇ ಬ್ರ್ಯಾಂಡ್‌ನ ಚಾಕೊಲೇಟ್ ಉತ್ಪಾದನೆಯಾಗುತ್ತಿದೆ ಎಂದು ವಿವರಿಸಿದರು.

ಅಡಿಕೆ ಆರೋಗ್ಯಕ್ಕೆ ಹಾನಿಕರ ಎಂಬ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಬಾಕಿ ಇದೆ. ಅಡಿಕೆ ವಹಿವಾಟಿನಲ್ಲಿ ಶೇ 5ರಷ್ಟು ಜಿಎಸ್‌ಟಿ ಪಾವತಿಸಲಾಗುತ್ತಿದ್ದು, ₹350 ಕೋಟಿಗೂ ಅಧಿಕ ಮೊತ್ತದ ತೆರಿಗೆ ಪಾವತಿಸಲಾಗಿದೆ. ಇದರಲ್ಲಿ ಶೇ 1ರ ಮೊತ್ತವನ್ನು ಸಂಶೋಧನೆಗೆ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು.

ನಾಲ್ಕು ವಿಧದ ಹೊಸ ಚಾಕೊಲೇಟ್, ಹೊಸ ಕಾಜು ಸುಪಾರಿ ‘ಸೌಗಂಧ್’ ಹಾಗೂ ‘ಕಲ್ಪ’ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಆರ್‌ಎಸ್‍ಎಸ್ ಮುಖಂಡರಾದ ನ.ಸೀತಾರಾಮ್ ಮತ್ತು ಗೋಪಾಲ ಚೆಟ್ಟಿಯಾರ್ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಕೆ., ನಿರ್ದೇಶಕರಾದ ಎಸ್.ಆರ್. ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ. ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ್ ನಾರಾಯಣ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್ ಇದ್ದರು.

‘10 ಲಕ್ಷ ಕ್ವಿಂಟಲ್ ಗುರಿ’

ನವೆಂಬರ್‌ ವೇಳೆಗೆ ಸಂಸ್ಥೆಯ 50ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಡಿಕೆ ವಾರ್ಷಿಕ ವಹಿವಾಟನ್ನು 5.50 ಲಕ್ಷ ಕ್ವಿಂಟಲ್‌ನಿಂದ 10 ಲಕ್ಷ ಕ್ವಿಂಟಲ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕಿಶೋರ್‌ಕುಮಾರ್ ಕೊಡ್ಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT