ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಗಳ ಗಡಿ ಬಂದ್‌: ₹300 ಕ್ಕೇರಿದ ಚಾಲಿ ಅಡಿಕೆ ಬೆಲೆ

ಉತ್ತರ ಭಾರತದಲ್ಲಿ ಹೆಚ್ಚಿದ ಬೇಡಿಕೆ
Last Updated 9 ಜೂನ್ 2020, 12:27 IST
ಅಕ್ಷರ ಗಾತ್ರ

ಮಂಗಳೂರು: ಚಾಲಿ ಅಡಿಕೆಗೆ ಕಳೆದ ಮೂರು ವರ್ಷಗಳಲ್ಲಿಯೇ ಅತ್ಯಧಿಕ ಬೆಲೆ ಬಂದಿದೆ. ನೇಪಾಳ ಹಾಗೂ ಬಾಂಗ್ಲಾ ದೇಶಗಳ ಗಡಿಗಳನ್ನು ಬಂದ್ ಮಾಡಿರುವ ಪರಿಣಾಮ ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಿದ್ದು, ಇದರಿಂದ ಚಾಲಿ ಅಡಿಕೆ ಬೆಲೆ ಪ್ರತಿ ಕೆ.ಜಿ. ₹300ಕ್ಕೇರಿದೆ. ಪ್ರತಿ ಕೆ.ಜಿ.ಗೆ ₹50 ರಷ್ಟು ಹೆಚ್ಚಳವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ಲಾಕ್‌ಡೌನ್‌ ಸಂದರ್ಭದಲ್ಲಿ ₹250 ಇದ್ದ ಚಾಲಿ ಅಡಿಕೆಯ ಬೆಲೆ, ಇದೀಗ ₹300ಕ್ಕೆ ಏರಿಕೆಯಾಗಿದೆ. ಉತ್ತರ ಭಾರತದ ಗುಜರಾತ, ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ಮಾರುಕಟ್ಟೆಗೆ ಈ ಅಡಿಕೆಯನ್ನು ಮಾರಾಟ ಮಾಡಲಾಗಿದೆ’ ಎಂದು ತಿಳಿಸಿದರು.

ಲಾಕ್‌ಡೌನ್‌ ಸಂದರ್ಭದಲ್ಲಿ ಕೊಕ್ಕೊ ಕೆಡದಂತೆ ನೋಡಿಕೊಳ್ಳಲು ಕೊಕ್ಕೊ ಬೀನ್ಸ್ ಅನ್ನು ಒಣಗಿಸಿ, ಸಂಗ್ರಹಿಸುವ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗಿದೆ. ಇದರಿಂದಾಗಿ ಕೊಕ್ಕೊ ಹಾಳಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

ಆರಂಭದಲ್ಲಿ ಏಪ್ರಿಲ್ 13 ರಿಂದ ಕ್ಯಾಂಪ್ಕೊದಿಂದ ₹ 250 ದರದಲ್ಲಿ ಅಡಿಕೆ ಖರೀದಿ ಮಾಡಲಾಗುತ್ತಿತ್ತು. ನಂತರ ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಿದ ಪರಿಣಾಮ ಬೆಲೆ ಏರಿಕೆಯಾಗಿದ್ದು, ಹಳೆಯ ಅಡಿಕೆಯ ಬೆಲೆ ಪ್ರತಿ ಕೆ.ಜಿ.ಗೆ ₹320ಕ್ಕೆ ಏರಿಕೆಯಾಗಿದೆ ಎಂದು ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಸುರೇಶ್‌ ಭಂಡಾರಿ ತಿಳಿಸಿದರು.

ಲಾಕ್‌ಡೌನ್‌ ಅವಧಿಯಲ್ಲಿ ಕ್ಯಾಂಪ್ಕೊದಿಂದ 8 ಸಾವಿರ ಕ್ವಿಂಟಲ್‌ ಕೊಕ್ಕೊ ಖರೀದಿ ಮಾಡಲಾಗಿದೆ. ಏಪ್ರಿಲ್‌ 9 ರಿಂದ ಕ್ಯಾಂಪ್ಕೊ ಕೊಕ್ಕೊ ಬೀನ್ಸ್‌ ಖರೀದಿ ಆರಂಭಿಸಿದ್ದು, ಆ ಸಂದರ್ಭದಲ್ಲಿ ಹಸಿ ಕೊಕ್ಕೊಗೆ ₹59 ಹಾಗೂ ಒಣ ಕೊಕ್ಕೊಗೆ ₹175 ಬೆಲೆ ಇತ್ತು. ಇದೀಗ ಹಸಿ ಕೊಕ್ಕೊ ಬೆಲೆ ₹50 ರಷ್ಟಿದೆ ಎಂದು ತಿಳಿಸಿದರು.

ರಿಟೇಲ್‌ ಪ್ಯಾಕ್‌ಗೆ ಬೇಡಿಕೆ: ಕ್ಯಾಂಪ್ಕೊದ ಮಿಲ್ಕ್‌ ಮಾರ್ವೆಲ್‌, ಡಯೇಟರ್‌, ಡಾರ್ಕ್‌ ಮತ್ತು ವೈಟ್‌ ಚಾಕಲೇಟ್‌ಗೆಗಳು ರಿಟೇಲ್‌ ಪ್ಯಾಕ್‌ನಲ್ಲಿ ಲಭ್ಯವಾಗಿವೆ. ಗಿಫ್ಟ್‌ ಬಾಕ್ಸ್‌ಗಿಂತ ರಿಟೇಲ್‌ ಬಾಕ್ಸ್‌ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ ಎಂದು ಭಂಡಾರಿ ತಿಳಿಸಿದರು.

*
ಲಾಕ್‌ಡೌನ್‌ನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಡಿಕೆ ಖರೀದಿ ಮಾಡಿರುವ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಸ್ಥಿರವಾಗಿರುವಂತೆ ನೋಡಿಕೊಂಡಿದೆ.
-ಎಸ್‌.ಆರ್. ಸತೀಶ್ಚಂದ್ರ, ಕ್ಯಾಂಪ್ಕೊ ಅಧ್ಯಕ್ಷ

*
ಸದ್ಯಕ್ಕೆ ಅಡಿಕೆ ಆಮದು ಸಂಪೂರ್ಣವಾಗಿ ನಿಂತಿದೆ. ಅಡಿಕೆ ಆಮದು ತಮ್ತೆ ಆರಂಭವಾದಲ್ಲಿ, ಸದ್ಯಕ್ಕೆ ಇರುವ ಬೆಲೆಯನ್ನು ಕಾಪಾಡಲು ಕಷ್ಟಕರವಾಗಲಿದೆ.
-ಸುರೇಶ್‌ ಭಂಡಾರಿ, ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT