ಮಂಗಳೂರು: ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಸುಮಾರು 80 ವರ್ಷ ಹಳೆಯ ಕಟ್ಟಡ ಕೆಡವಿ, ಕ್ರಿಟಿಕಲ್ ಕೇರ್ ಘಟಕಕ್ಕಾಗಿ ಮಂಜೂರಾದ ₹ 17 ಕೋಟಿ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸುವ ಸಾಧ್ಯತೆ ಪರಿಶೀಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.
ಇಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು.
ಆಸ್ಪತ್ರೆಯ ಹಳೆಯ ಕಟ್ಟಡವು ಮಳೆಗಾಲದಲ್ಲಿ ಸೋರುತ್ತದೆ ಎಂದು ಸಮಿತಿ ಸದಸ್ಯ ಪದ್ಮನಾಭ ಅಮೀನ್ ಗಮನ ಸೆಳೆದರು.
’ಹಳೆಕಟ್ಟಡವನ್ನು ಸಮಗ್ರವಾಗಿ ದುರಸ್ತಿಪಡಿಸಲು ₹ 2 ಕೋಟಿಯ ಕ್ರಿಯಾಯೋಜನೆ ತಯಾರಿಸಿದ್ದೇವೆ’ ಎಂದು ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುಪ್ರಸಾದ್ ತಿಳಿಸಿದರು.
‘ಆರೋಗ್ಯ ರಕ್ಷಾ ಸಮಿತಿಯಲ್ಲಿ ಲಭ್ಯ ಇರುವ ಹಣವನ್ನು ನಿರ್ಮಾಣ ಮತ್ತು ದುರಸ್ತಿ ಚಟುವಟಿಕೆಗೆ ಬಳಸಲು ಅವಕಾಶ ಇಲ್ಲ. ಕಟ್ಟಡ ದುರಸ್ತಿಗೆ ಸರ್ಕಾರ ಅನುದಾನದ ಅಗತ್ಯವಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕಿ ಮತ್ತು ಅಧೀಕ್ಷಕಿ ಡಾ.ಜೆಸಿಂತಾ ತಿಳಿಸಿದರು.
‘ಕ್ರಿಟಿಕಲ್ ಕೇರ್ ಘಟಕಕ್ಕೆ 50 ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಿಸಬೇಕಿದೆ. ಹಳೆ ಕಟ್ಟಡವನ್ನು ಪದೇ ಪದೇ ದುರಸ್ತಿಪಡಿಸುವ ಬದಲು, ಲಭ್ಯ ಅನುದಾನದಲ್ಲಿ ಹೊಸ ಕಟ್ಟಡ ಕಟ್ಟಬಹುದು. 175 ವರ್ಷ ಹಳೆಯ ಆಡಳಿತ ಕಚೇರಿಯ ಪಾರಂಪರಿಕ ಕಟ್ಟಡವನ್ನು ಹಾಗೆಯೇ ಉಳಿಸಿಕೊಂಡು, ಹಳೆ ಕಟ್ಟಡ ಉಳಿದ ಭಾಗ ಕೆಡಹುವ ಬಗ್ಗೆ ಪರಿಶೀಲಿಸಿ’ ಎಂದು ಸಚಿವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರಿಗೆ ನಿರ್ದೇಶನ ನೀಡಿದರು.
ಸೇವೆಯಲ್ಲಿ ಸುಧಾರಣೆ ತನ್ನಿ:
ಆರೋಗ್ಯ ರಕ್ಷಾ ಸಮಿತಿಯಲ್ಲಿ ₹25ಕೋಟಿಗಳಷ್ಟು ಹಣವಿದ್ದರೂ ಆಸ್ಪತ್ರೆ ಸೇವೆಯಲ್ಲಿ ಸುಧಾರಣೆ ತರಲು ಏಕೆ ಕ್ರಮ ವಹಿಸಿಲ್ಲ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
‘905 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಗೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಇಲ್ಲ. ಹೊರರೋಗಿಗಳ ವಿಭಾಗದಲ್ಲಿ ಜನ ಸರದಿಯಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಜನರಿಗೆ ಸವಲತ್ತು ಕಲ್ಪಿಸುವುದಕ್ಕೆ ಸಮಿತಿಯ ಹಣವನ್ನು ಬಳಸಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.
‘ಅಪಘಾತ ಚಿಕಿತ್ಸೆ ವಿಭಾಗದಲ್ಲಿ ವೈದ್ಯಾಧಿಕಾರಿಗಳಿಂದ ತ್ವರಿತ ಸ್ಪಂದನೆ ಸಿಗುತ್ತಿಲ್ಲ ಹಾಗೂ ಕೆಲವು ಒಪಿಡಿಗಳಲ್ಲಿ ಮಧ್ಯಾಹ್ನ 1.45ರ ಬಳಿಕ ಹಿರಿಯ ತಜ್ಞವೈದ್ಯರು ಲಭ್ಯ ಇರುವುದಿಲ್ಲ ಎಂಬ ದೂರುಗಳಿವೆ’ ಎಂದೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
‘ಮಧ್ಯಾಹ್ನದ ಬಳಿಕವೂ ಹಿರಿಯ ತಜ್ಞವೈದ್ಯರು ಲಭ್ಯವಿರುವಂತೆ ಕ್ರಮವಹಿಸುತ್ತೇವೆ’ ಎಂದು ಈ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ಬಳಸಿಕೊಳ್ಳುತ್ತಿರುವ ಕೆಎಂಸಿಯ ಸಹಾಯಕ ಡೀನ್ ಡಾ.ಸುರೇಶ್ ಶೆಟ್ಟಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯೋಗೀಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಕೆ.ಎಂ.ಅಬ್ದುಲ್ ಕರೀಂ, ಶಶಿಧರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.