ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿಯುವುದೇ ಕಾಂಗ್ರೆಸ್‌, ಬಿಜೆಪಿ ಸ್ಪರ್ಧೆ

ಅಕ್ಷರ ಗಾತ್ರ

ದಾವಣಗೆರೆ: ಮಧ್ಯ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ದಾವಣಗೆರೆ ವಿಧಾನ ಸಭಾ ಕ್ಷೇತ್ರವು ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಕಮ್ಯುನಿಸ್ಟ್‌ ಪಕ್ಷದ ದೊಡ್ಡ ಕಾರ್ಮಿಕರ ಬಳಗವನ್ನೇ ಹೊಂದಿದ್ದ ಈ ವಾಣಿಜ್ಯ ನಗರವು ಕ್ರಮೇಣ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ.

ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದ ದಾವಣಗೆರೆಯು ಜೆ.ಎಚ್.ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗ 1997ರಲ್ಲಿ ಸ್ವಾತಂತ್ರ ಜಿಲ್ಲೆಯಾಗಿ ಹೊರಹೊಮ್ಮಿತ್ತು. ನಂತರ ದಾವಣಗೆರೆಯಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚು ಬಿರುಸುಗೊಂಡವು.

ಚುನಾವಣೆಯ ಹಾದಿ...:
ವಿಧಾನಸಭಾ ಕ್ಷೇತ್ರ ವಿಂಗಡಣೆಯಾದ ನಂತರ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಕೆ.ಟಿ.ಜಂಬಣ್ಣ ಅವರು ಗಾಂಜಿ ವೀರಪ್ಪ ಅವರ ವಿರುದ್ಧ ಜಯಗಳಿಸಿದರು. ಇದು ಪ್ರಜಾ ಸೋಷಿಯಲಿಸ್ಟ್‌ ಪಕ್ಷಕ್ಕೆ (ಪಿಎಸ್‌ಪಿ) ದೊರೆತ ಮೊದಲ ಜಯವಾಗಿತ್ತು.

1972ರಲ್ಲಿ ನಡೆದ ಚುನಾವಣೆಯಲ್ಲಿ ಸಿ.ನಾಗಮ್ಮ ಕೇಶವಮೂರ್ತಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಷಿಯಲಿಸ್ಟ್‌ ಪಕ್ಷದ ಕೆ.ಜಿ.ಮಹೇಶ್ವರಪ್ಪ ವಿರುದ್ಧ ಗೆಲುವು ಸಾಧಿಸಿದರು. ದೇವರಾಜು ಅರಸು ಸಚಿವ ಸಂಪುಟದಲ್ಲಿ ಅವರು ಸಚಿವೆ ಸ್ಥಾನ ಪಡೆದರು. ಇದು ದಾವಣಗೆರೆಗೆ ದೊರೆತ ಮೊದಲ ಸಚಿವ ಸ್ಥಾನವಾಗಿತ್ತು.

1994ರಲ್ಲಿ ಮೊದಲ ಬಾರಿಗೆ ಶಾಮನೂರು ಶಿವಶಂಕರಪ್ಪ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಇದೇ ಕ್ಷೇತ್ರದಿಂದ 2004ರವರೆಗೆ ಸ್ಪರ್ಧಿಸಿ ನಿರಂತರವಾಗಿ ಗೆಲುವು ಸಾಧಿಸುತ್ತಾರೆ.

ಈ ಮಧ್ಯ 1999ರಲ್ಲಿ ತಮ್ಮ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಒಂದು ವರ್ಷದ ಅವಧಿಗೆ ಸಂಸದರಾಗಿಯೂ ಆಯ್ಕೆಯಾಗುತ್ತಾರೆ. ಹೀಗೆ 1999ರಿಂದ ಆರಂಭವಾದ ತಂದೆ, ಮಗನ ಜುಗಲ್‌ಬಂದಿ ರಾಜಕಾರಣವು 2013ರ ವರೆಗೂ ಮುಂದುವರಿದಿದೆ.

ಈ ನಡುವೆ 2008ರಲ್ಲಿ ದಾವಣಗೆರೆ ವಿಧಾನ ಸಭಾ ಕ್ಷೇತ್ರವು ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಾಗಿ ವಿಂಗಡಣೆಯಾಯಿತು. ಉತ್ತರ ಕ್ಷೇತ್ರದಲ್ಲಿ ಎಸ್‌.ಎಸ್.ಮಲ್ಲಿಕಾರ್ಜುನ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸುತ್ತಾ ಬಂದಿದ್ದಾರೆ.

1999ರಲ್ಲಿ ನಡೆದ ಚುನಾವಣೆಯಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ ಅವರು ಪ್ರಥಮ ಬಾರಿ ಸ್ಪರ್ಧಿಸಿ ಜಯ ಗಳಿಸಿದರು. ಆಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎಸ್.ಎಂ.ಕೃಷ್ಣ ನೇತೃತ್ವದ ಸಚಿವ ಸಂಪುಟದಲ್ಲಿ ಅವರು ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವರಾದರು. ಇದು ಚಿತ್ರದುರ್ಗದಿಂದ ದಾವಣಗೆರೆ ವಿಭಜನೆಯಾಗಿ ಸ್ವತಂತ್ರ ಜಿಲ್ಲೆಯಾದ ನಂತರ ದೊರೆತ ಮೊದಲ ಸಚಿವ ಸ್ಥಾನವಾಗಿತ್ತು.

2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಎಪಿಎಂಸಿ ಮತ್ತು ತೋಟಗಾರಿಕೆ ಸಚಿವರಾಗಿ 2 ವರ್ಷ ಆಡಳಿತ ನಡೆಸಿದರು. ಸಿದ್ದರಾಮಯ್ಯ ಅವರು ಸಚಿವ ಸಂಪುಟದ ಪುನರ್‌ ರಚನೆ ಮಾಡಿ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಿದ್ದ ಖಾತೆಯನ್ನು ಹಿಂದಕ್ಕೆ ಪಡೆದು, ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಸಚಿವ ಸಂಪುಟದ ಸ್ಥಾನ ನೀಡುವ ಮೂಲಕ ಎಪಿಎಂಸಿ ಮತ್ತು ತೋಟಗಾರಿಕೆ ಇಲಾಖೆ ಜವಾಬ್ದಾರಿ ವಹಿಸಲಾಯಿತು. ಆ ಮೂಲಕವಾಗಿ ತಂದೆ ಒಂದು ಬಾರಿ ಸಚಿವರಾದರೆ, ಪುತ್ರ ಮಲ್ಲಿಕಾರ್ಜುನ 2 ಬಾರಿ ಸಚಿವರಾಗಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಅಪ್ಪ–ಮಗ ಇಬ್ಬರಿಗೂ ಕಾಯಂ ಎದುರಾಳಿ. 1999ರಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ವಿರುದ್ಧ ಸ್ಪರ್ಧಿಸಿ 4,293 ಮತಗಳ ಅಂತರಿಂದ ಸೋಲು ಅನುಭವಿಸಿದರು. ನಂತರ ಅವರು 2004 ಮತ್ತು 2008ರಲ್ಲಿ ಎರಡು ಬಾರಿ ಶಾಮನೂರು ಶಿವಶಂಕರಪ್ಪ ವಿರುದ್ಧ ಸ್ಪರ್ಧಿಸಿ ಬಲವಾದ ಸ್ಪರ್ಧೆ ನೀಡಿದರು. ಮತ್ತೊಮ್ಮೆ ಅವರ ಎದುರಾಳಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

ಇದೀಗ 2018ರ ಚುನಾವಣೆಯು ಹೊಸ್ತಿಲಲ್ಲಿದೆ. ಎಂದಿನಂತೆ ದಕ್ಷಿಣ ಕ್ಷೇತ್ರದಲ್ಲಿ ಮತ್ತೆ ತ್ರಿಕೋನ ಸ್ಪರ್ಧೆಯ ಬಿರುಸಿನ ಚಟುವಟಿಕೆ ಆರಂಭವಾಗಿದೆ.

ಎಂದಿನಂತೆ ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿಯಿಂದ ಯಶವಂತರಾವ್‌ ಜಾಧವ್‌ ಹಾಗೂ ಈ ಬಾರಿ ಜೆಡಿಎಸ್‌ನಿಂದ ಅಮಾನುಲ್ಲಾ ಖಾನ್‌ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ.

ದಾವಣಗೆರೆ ವಿಧಾನಸಭಾ ಕ್ಷೇತ್ರ

1957ರಲ್ಲಿ ನಡೆದ ಚುನಾವಣೆ
ಕೆ.ಟಿ.ಜಂಬಣ್ಣ (ಪಿಎಸ್‌ಪಿ)
ಪಡೆದ ಮತ– 19,568
ಗಾಂಜಿ ವೀರಪ್ಪ (ಐಎನ್‌ಸಿ)
ಪಡೆದ ಮತ–13,157
ಅಂತರ – 6,411
ಶೇ 19.25

1962ರಲ್ಲಿ..
ಕೊಂಡಜ್ಜಿ ಬಸಪ್ಪ (ಐಎನ್‌ಸಿ)
ಪಡೆದ ಮತ– 23,739
ಸಿ.ಕೇಶವಮೂರ್ತಿ (ಪಿಎಸ್‌ಪಿ)
ಪಡೆದ ಮತ– 17,977
ಅಂತರ– 5,762
ಶೇ 13.42

1967ರಲ್ಲಿ...
ಕೆ.ಬಸಪ್ಪ (ಐಎನ್‌ಸಿ)
ಪಡೆದ ಮತ– 17,809
ಸಿ.ಕೆ.ಮೂರ್ತಿ (ಪಿಎಸ್‌ಪಿ)
ಪಡೆದ ಮತ– 14,351
ಅಂತರ– 3,458
ಶೇ 8.28

1972ರಲ್ಲಿ...
ಸಿ.ನಾಗಮ್ಮ ಕೇಶವಮೂರ್ತಿ (ಐಎನ್‌ಸಿ)
ಪಡೆದ ಮತ– 33,163
ಕೆ.ಜಿ.ಮಹೇಶ್ವರಪ್ಪ (ಸೋಷಿಯಲಿಸ್ಟ್‌ ಪಾರ್ಟಿ–ಎಸ್‌ಒಪಿ)
ಪಡೆದ ಮತ– 10,113
ಅಂತರ– 23,050
ಶೇ 49.14

1978ರಲ್ಲಿ...
ಪಂಪಾಪತಿ (ಸಿಪಿಐ)
ಪಡೆದ ಮತ– 32,199
ಕೆ.ಮಲ್ಲಪ್ಜ (ಜೆಎನ್‌ಪಿ– ಜನತಾ ಪಾರ್ಟಿ)
ಪಡೆದ ಮತ– 24,410
ಅಂತರ– 7,789
ಶೇ 12.36

1983ರಲ್ಲಿ...
ಪಂಪಾಪತಿ (ಸಿಪಿಐ)
ಪಡೆದ ಮತ– 36,507
ಎಚ್‌.ಮಹಮ್ಮದ್‌ ಇಕ್ಬಾಲ್‌ ಸಾಬ್‌ (ಪಕ್ಷೇತರ)
ಅಂತರ– 18,579
ಶೇ 24.53

1985ರಲ್ಲಿ...
ಪಂಪಾಪತಿ (ಸಿಪಿಐ)
ಪಡೆದ ಮತ– 35,639
ಯಜಮಾನ್ ಮೋತಿ ವೀರಣ್ಣ (ಕಾಂಗ್ರೆಸ್‌)
ಪಡೆದ ಮತ– 31,866
ಅಂತರ– 3,773
ಶೇ 5.05

1989ರಲ್ಲಿ..
ವೈ.ಎಂ.ವೀರಣ್ಣ (ಕಾಂಗ್ರೆಸ್)
ಪಡೆದ ಮತ– 44,167
ಪಂಪಾಪತಿ (ಸಿಪಿಐ)
ಪಡೆದ ಮತ– 21,408
ಅಂತರ– 22,759
ಶೇ 25.59

1994ರಲ್ಲಿ...
ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್)
ಪಡೆದ ಮತ– 37,794
ಕೆ.ಬಿ.ಶಂಕರನಾರಾಯಣ (ಬಿಜೆಪಿ)
ಪಡೆದ ಮತ– 36,247
ಅಂತರ– 1,547
ಶೇ 1.47

1999ರಲ್ಲಿ...
ಎಸ್‌.ಎಸ್‌.ಮಲ್ಲಿಕಾರ್ಜುನ (ಕಾಂಗ್ರೆಸ್‌)
ಪಡೆದ ಮತ– 54,401
ಯಶವಂತರಾವ್‌ ಜಾಧವ್ (ಬಿಜೆಪಿ)
ಪಡೆದ ಮತ– 50,108
ಅಂತರ– 4,293
ಶೇ 3.83

2004ರಲ್ಲಿ...
ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್)
ಪಡೆದ ಮತ– 63,499
ಯಶವಂತರಾವ್ ಜಾಧವ್ (ಬಿಜೆಪಿ)
ಪಡೆದ ಮತ– 41,366
ಅಂತರ– 22,133
ಶೇ 19.78

2008ರಲ್ಲಿ... ವಿಧಾನ ಸಭಾ ಕ್ಷೇತ್ರವು ಉತ್ತರ/ ದಕ್ಷಿಣ ಕ್ಷೇತ್ರವಾಗಿ ವಿಂಗಡಣೆ.
ದಕ್ಷಿಣ
ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌)
ಪಡೆದ ಮತ– 41,675
ಯಶವಂತರಾವ್‌ ಜಾಧವ್ (ಬಿಜೆಪಿ)
ಪಡೆದ ಮತ– 35,317
ಅಂತರ– 6,382
ಶೇ 6.33

2013ರಲ್ಲಿ...(ದಕ್ಷಿಣ)
ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್‌)
ಪಡೆದ ಮತ– 66,320
ಕರೆಕಟ್ಟೆ ಸೈಯದ್‌ ಸೈಫುಲ್ಲಾ (ಜೆಡಿಎಸ್)
ಪಡೆದ ಮತ– 26,162
ಅಂತರ– 40,158
ಶೇ 33.35
 

ಒಟ್ಟು ಮತದಾರರು– 1,91,705
ಪುರುಷ ಮತದಾರರು– 96,206
ಮಹಿಳೆ ಮತದಾರರು–95,474
ಇತರೆ ಮತದಾರರು– 25
(ಏ.28, 2014ರ ಮಾಹಿತಿ ಅನ್ವಯ)

ಒಟ್ಟು ಚುನಾವಣೆಗಳು –13

ಪಕ್ಷಗಳ ಗೆಲವು...
ಕಾಂಗ್ರೆಸ್‌– 9
ಸಿಪಿಐ– 3 (1978, 1983, 1985)
ಪಿಎಸ್‌ಪಿ– 1 (1957)

ಅಭಿವೃದ್ಧಿ ಕಾಣದ ಕ್ಷೇತ್ರ...

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಭಾಗದಲ್ಲಿ 39 ಸ್ಲಂ ಪ್ರದೇಶಗಳಿದ್ದು, ಇಲ್ಲಿನ ನಿವಾಸಿಗಳು ಇಂದಿಗೂ ಶುದ್ಧ ಕುಡಿಯುವ ನೀರು, ಒಳಚರಂಡಿ, ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಹಾಗೂ ಉತ್ತಮ ರಸ್ತೆ ಒಳಗೊಂಡಂತೆ ಮೂಲಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಪ್ರತಿಭಟನೆ, ಧರಣಿ ನಡೆಸುತ್ತಾ ಬಂದಿದ್ದಾರೆ. ಇಂದಿಗೂ ಈಡೇರಿಲ್ಲ.

ಎಸ್‌.ಎಸ್‌.ಮಲ್ಲಿಕಾರ್ಜುನ ಶಾಸಕರಾಗಿದ್ದ ಅವಧಿಯಲ್ಲಿ ಅರ್ಹರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ನಂತರ ಅಭಿವೃದ್ಧಿ ಕೆಲಸಗಳು ನಡೆದಿದ್ದು ಬೆರಳೇಣಿಕೆ ಮಾತ್ರ! ಹಳೇ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಅಶೋಕ ಚಿತ್ರಮಂದಿರದ ಬಳಿಯ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಯೋಜನೆ ಜಾರಿಗೆ ಜನಪ್ರತಿನಿಧಿಗಳು ಆಸಕ್ತಿ ವಹಿಸುತ್ತಿಲ್ಲ.

ಹೆಗಡೆ ನಗರದ ನಿವಾಸಿಗಳು 30 ವರ್ಷಗಳಿಂದ ನಿವೇಶನ, ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಾಲೇ ಬಂದಿದ್ದಾರೆ. ಇಂದಿಗೂ ಅವರ ಬೇಡಿಕೆ ಈಡೇರಿಲ್ಲ. ಜನಪ್ರತಿನಿಧಿಗಳು ಕೇವಲ ವೋಟ್‌ ಬ್ಯಾಂಕ್‌ಗಾಗಿ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಅಳಲು ಇಲ್ಲಿನ ಬಹುತೇಕರದ್ದು.

ಈ ಭಾಗದಲ್ಲಿ ಬಹುತೇಕ ದಲಿತ, ಮುಸ್ಲಿಂ, ಕುರುಬ, ಕ್ರಿಶ್ಚಿಯನ್‌, ಹಿಂದುಳಿದ ಸಮುದಾಯದ ಜನರೇ ಹೆಚ್ಚು ಇದ್ದಾರೆ. ಮುಸ್ಲಿಂ ಮತದಾರರ ಸಂಖ್ಯೆ ತುಸು ಹೆಚ್ಚು ಎನ್ನಬಹುದು. ಕೆಲ ಭಾಗದಲ್ಲಿ ಮಾತ್ರ ಲಿಂಗಾಯತ ಸಮುದಾಯದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT