ದನಗಳ್ಳನ ಬಂಧನ

7

ದನಗಳ್ಳನ ಬಂಧನ

Published:
Updated:

ಮಂಗಳೂರು: ಮೂಡುಶೆಡ್ಡೆ ಬೈಲ್‌ ಎಂಬಲ್ಲಿ ಜುಲೈ 17ರ ನಸುಕಿನ ಜಾವ ಮಾಲೀಕರನ್ನು ಬೆದರಿಸಿ ಹಟ್ಟಿಯಿಂದ ದನಗಳನ್ನು ಕಳವು ಮಾಡಿಕೊಂಡು ಹೋಗಿದ್ದ ತಂಡದಲ್ಲಿದ್ದ ಅಂತರರಾಜ್ಯ ದನಗಳ್ಳನೊಬ್ಬನನ್ನು ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಜ್ಪೆ ಸಮೀಪದ ಕಳವಾರು ಗ್ರಾಮದ ಆಶ್ರಯ ಕಾಲೋನಿ ನಿವಾಸಿ ಮೊಹಮ್ಮದ್ ಮುನೀರ್ ಅಲಿಯಾಸ್ ಮುನ್ನ ಅಲಿಯಾಸ್ ಮುನಾವರ್‌ (36) ಬಂಧಿತ ಆರೋಪಿ. ಈತನ ರಾಜ್ಯದ ವಿವಿಧೆಡೆಯಿಂದ ದನಗಳನ್ನು ಕಳವು ಮಾಡಿ ಕೇರಳಕ್ಕೆ ಸಾಗಿಸುತ್ತಿದ್ದ ತಂಡದಲ್ಲಿದ್ದ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.

ಮೂಡುಶೆಡ್ಡೆ ಬೈಲ್‌ ನಿವಾಸಿ ಪುರುಷೋತ್ತಮ ಎಂಬುವವರ ಮನೆಯ ಹಟ್ಟಿಯಲ್ಲಿದ್ದ ದನಗಳನ್ನು ಕಳವು ಮಾಡಿದ್ದ ಆರೋಪದಲ್ಲಿ ಇಮ್ರಾನ್‌ ಅಲಿಯಾಸ್ ಕುಟ್ಟ ಇಮ್ರಾನ್, ಉಮ್ಮರ್ ಫಾರೂಕ್‌ ಮತ್ತು ನಿಸಾರುದ್ದೀನ್ ಅಲಿಯಾಸ್ ಪಾರಿವಾಳ ನಿಸಾರ್ ಎಂಬುವವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೊ ವಾಹನವನ್ನು ವಶಪಡಿಸಿಕೊಂಡಿದ್ದರು. ಶನಿವಾರ ಕಳವಾರು ಚರ್ಚ್‌ ಬಳಿ ಇದ್ದ ಮೊಹಮ್ಮದ್ ಮುನೀರ್‌ನನ್ನು ಬಂಧಿಸಲಾಗಿದೆ.

ಮುನೀರ್‌ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಮೂರು, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಒಂದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು, ಬೈಂದೂರು ಠಾಣೆಯಲ್ಲಿ ಒಂದು, ಹಾಸನ ಪೊಲೀಸ್ ಠಾಣೆಯಲ್ಲಿ ಒಂದು ಸೇರಿ ದನಗಳ್ಳತನದಲ್ಲಿ ಭಾಗಿಯಾದ ಆರೋಪಕ್ಕೆ ಸಂಬಂಧಿಸಿದಂತೆ ಏಳು ಪ್ರಕರಣಗಳು ಬಾಕಿ ಇವೆ. ಬಜ್ಪೆ, ಕಾರ್ಕಳ ಗ್ರಾಮಾಂತರ ಹಾಗೂ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಬಂಧನ ವಾರೆಂಟ್‌ ಕೂಡ ಹೊರಡಿಸಲಾಗಿತ್ತು ಎಂದು ಕಮಿಷನರ್‌ ತಿಳಿಸಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್ ಶಾಂತರಾಮ, ಸಬ್ ಇನ್‌ಸ್ಪೆಕ್ಟರ್‌ಗಳಾದ ಎಚ್‌.ಎಂ.ಶ್ಯಾಮ್ ಸುಂದರ್ ಮತ್ತು ಹೆಚ್.ಡಿ.ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !