ಗುರುವಾರ , ಸೆಪ್ಟೆಂಬರ್ 19, 2019
26 °C
ಎನ್‌ಸಿಐಬಿ ಹೆಸರಿನಲ್ಲಿ ಬೆದರಿಸಿ ಹಣ ಸುಲಿಗೆಗೆ ಸಿದ್ಧತೆ

ಎಂಟು ಮಂದಿ ಅಂತರರಾಜ್ಯ ವಂಚಕರ ಬಂಧನ

Published:
Updated:
Prajavani

ಮಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (ಎನ್‌ಸಿಐಬಿ) ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆಗೆ ಪ್ರಯತ್ನಿಸುತ್ತಿದ್ದ ಎಂಟು ಮಂದಿ ಅಂತರರಾಜ್ಯ ವಂಚಕರ ತಂಡವನ್ನು ನಗರದ ಲಾಡ್ಜ್‌ ಒಂದರಲ್ಲಿ ಪೊಲೀಸರು ಶುಕ್ರವಾರ ಸೆರೆ ಹಿಡಿದಿದ್ದಾರೆ.

ಎನ್‌ಸಿಐಬಿ ನಿರ್ದೇಶಕ ಎಂದು ಪರಿಚಯಿಸಿಕೊಳ್ಳುತ್ತಿದ್ದ ಕೇರಳದ ಸ್ಯಾಮ್‌ ಪೀಟರ್‌ ಪ್ರಮುಖ ಆರೋಪಿ. ಈತನೊಂದಿಗೆ ಇದ್ದ ಮಂಗಳೂರಿನ ಮೊಹಿದ್ದೀನ್‌ ಅಲಿಯಾಸ್‌ ಚೆರಿಯನ್‌, ಹೋಟೆಲ್‌ ಉದ್ಯಮಿ ಅಬ್ದುಲ್‌ ಲತೀಫ್‌, ಸ್ಯಾಮ್‌ ಪೀಟರ್‌ನ ಅಂಗರಕ್ಷಕರಾಗಿದ್ದ ಮಡಿಕೇರಿಯ ಟಿ.ಕೆ.ಬೋಪಣ್ಣ, ವಿರಾಜಪೇಟೆ ತಾಲ್ಲೂಕಿನ ಚಿನ್ನಪ್ಪ, ಬೆಂಗಳೂರು ನಗರದ ನೀಲಸಂದ್ರ ನಿವಾಸಿ ಸುನೀಲ್‌ ರಾಜು ಮತ್ತು ಉತ್ತರಹಳ್ಳಿ ನಿವಾಸಿ ಕೋದಂಡರಾಮ ಎಂಬುವವರನ್ನು ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ‘ಆರೋಪಿಗಳಿಂದ ಎರಡು ಕಾರು, ಒಂದು ರಿವಾಲ್ವರ್‌, ಎಂಟು ಸಜೀವ ಗುಂಡುಗಳು, ಒಂದು ನಕಲಿ ಪಿಸ್ತೂಲ್‌, ರಬ್ಬರ್‌ ಗುಂಡುಗಳು, ಹತ್ತು ಮೊಬೈಲ್‌, ಲ್ಯಾಪ್‌ ಟಾಪ್‌, ವಾಯ್ಸ್‌ ರೆಕಾರ್ಡರ್‌, ವೈ ಫೈ ಕ್ಯಾಮೆರಾ ಸೇರಿದಂತೆ ಹಲವು ತಾಂತ್ರಿಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು.

ಎನ್‌ಸಿಐಬಿ ನಿರ್ದೇಶ, ಭಾರತ ಸರ್ಕಾರ ಎಂಬ ನಕಲಿ ಫಲಕವನ್ನು ಅಳವಡಿಸಿಕೊಂಡಿದ್ದ ಕಾರಿನಲ್ಲಿ ಆರೋಪಿಗಳು ಪಂಪ್‌ವೆಲ್‌ನ ಸಾಯಿ ಆರ್ಯ ಲಾಡ್ಜ್‌ಗೆ ಬಂದಿದ್ದರು. ತನಿಖೆಯ ನೆಪಹೇಳಿ ನೋಂದಣಿ ಪುಸ್ತಕದಲ್ಲಿ ದಾಖಲಾತಿ ಇಲ್ಲದೇ ಎರಡು ದಿನಗಳಿಂದ ತಂಗಿದ್ದರು. ಖಚಿತ ಮಾಹಿತಿ ಆಧರಿಸಿ ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿದ ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶಾಂತಾರಾಮ ಮತ್ತು ತಂಡ ಎಂಟು ಮಂದಿಯನ್ನು ಬಂಧಿಸಿದೆ ಎಂದು ತಿಳಿಸಿದರು.

ಸುಲಿಗೆಗೆ ಹೊಂಚು?: ‘ಕಪ್ಪು ಬಣ್ಣದ ಟಿಂಟ್‌ ಅಳವಡಿಸಿದ್ದ ಮಹಿಂದ್ರಾ ಟಿಯುವಿ–300 ಕಾರಿನಲ್ಲಿ ಸ್ಯಾಮ್‌ ಪೀಟರ್‌ ತಿರುಗಾಡುತ್ತಿದ್ದ. ಅದರಲ್ಲಿ ಎನ್‌ಸಿಐಬಿ ನಿರ್ದೇಶಕ ಎಂಬ ಫಲಕ ಹಾಕಿಕೊಂಡಿದ್ದ. ಮೊದಲು ಅಂಗರಕ್ಷಕರು ಪರಾರಿಯಾಗಲು ಯತ್ನಿಸಿದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಯಾಮ್‌ ಮತ್ತು ಇಬ್ಬರು ಕೊಠಡಿಯಲ್ಲಿರುವ ಮಾಹಿತಿ ನೀಡಿದರು. ಮಂಗಳೂರಿನ ಇಬ್ಬರ ನೆರವಿನಲ್ಲಿ ವ್ಯಕ್ತಿಯೊಬ್ಬರಿಂದ ಹಣ ಸುಲಿಗೆಗೆ ಹೊಂಚು ಹಾಕುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಸ್ಯಾಮ್‌ ಪೀಟರ್‌ ಪಶ್ಚಿಮ ಬಂಗಾಳ ಮತ್ತು ಒಡಿಶಾದ ಭುವನೇಶ್ವರದಲ್ಲಿ ಕೆಲವು ವ್ಯಕ್ತಿಗಳ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ. ಮಣಿಪಾಲದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಮಾಹಿತಿಯೂ ದೊರಕಿದೆ. ಆತ ಅಂತರರಾಜ್ಯ ಮಟ್ಟದಲ್ಲಿ ಹಣ ಸುಲಿಗೆ ಮಾಡುತ್ತಿರುವ ಶಂಕೆ ಇದೆ. ಆತನ ತಂಡದಿಂದ ನಡೆದಿರಬಹುದಾದ ಆರ್ಥಿಕ ಅಪರಾಧಗಳ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದರು.

 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಶಸ್ತ್ಸಾಸ್ತ್ರ ಕಾಯ್ದೆ ಮತ್ತು ರಾಷ್ಟ್ರ ಲಾಂಛನ ದುರ್ಬಳಕೆ ತಡೆ ಕಾಯ್ದೆಗಳ ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಡಿಸಿಪಿಗಳಾದ ಅರುಣಾಂಗ್ಷು ಗಿರಿ, ಲಕ್ಷ್ಮೀಗಣೇಶ್‌, ಕೇಂದ್ರ ಉಪ ವಿಭಾಗದ ಎಸಿಪಿ ಭಾಸ್ಕರ್‌ ಒಕ್ಕಲಿಗ ಪತ್ರಿಕಾಗೋಷ್ಠಿಯಲ್ಲಿದ್ದರು.

Post Comments (+)