ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಜಾಡಿಯಲ್ಲಿ ಆಮ್ಲಜನಕ ಬೀರುತ್ತಿದೆ ಅಶ್ವತ್ಥವನ

ಪರಿಸರ ಪ್ರೇಮಿ ಡಾ.ಶ್ರೀಷಕುಮಾರ್‌ರಿಂದ ಸಮಾಜಕ್ಕೊಂದು ಕೊಡುಗೆ
Last Updated 10 ಜೂನ್ 2021, 14:22 IST
ಅಕ್ಷರ ಗಾತ್ರ

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಒಂದಿಷ್ಟು ಜಾಗವಿದ್ದರೂ, ಅದನ್ನು ತಮ್ಮ ಆದಾಯಕ್ಕಾಗಿ ಬಳಸಿಕೊಳ್ಳುವ ಜನರೇ ಹೆಚ್ಚು. ಇರುವ ಜಾಗದಲ್ಲಿ ಕೃಷಿ ಮಾಡಿ, ಇಲ್ಲವೇ ಕಟ್ಟಡ ನಿರ್ಮಿಸಿ ನಿರಂತರ ಆದಾಯದ ನಿರೀಕ್ಷೆ ಮಾಡುವವರ ಮಧ್ಯೆ ಪರಿಸರ ಪ್ರೇಮಿಯೊಬ್ಬರು ತಾವು ಖರೀದಿಸಿದ ಜಾಗದಲ್ಲಿ ಶುದ್ಧ ಆಮ್ಲಜನಕ ಉತ್ಪತ್ತಿ ಮಾಡುವ ಮರಗಳನ್ನು ಬೆಳೆಸುವ ಮೂಲಕ ಗಮನ ಸೆಳೆದಿದ್ದಾರೆ.

ಪುತ್ತೂರಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ.ಶ್ರೀಷ ಕುಮಾರ್ ಎಂ.ಕೆ. ಅವರೇ ಈ ಪರಿಸರ ಪ್ರೇಮಿ. ತನಗಲ್ಲದಿದ್ದರೂ ಶುದ್ಧ ಆಮ್ಲಜನಕ ಲಭಿಸುವ ಮೂಲಕ ಸಮಾಜಕ್ಕೆ ಒಂದಿಷ್ಟು ಸಹಾಯವಾಗಲಿ ಎಂಬ ದೂರದೃಷ್ಟಿಯ ಚಿಂತನೆಯಿಂದ ಹಲವು ಜಾತಿಯ ಮರಗಳನ್ನು ಬೆಳೆಸಿದ್ದಾರೆ.

‘ಕಾರ್ಖಾನೆಗಳ, ವಾಹನಗಳ ವಿಷಯುಕ್ತ ಹೊಗೆ, ನಿರಂತರವಾಗಿ ನಡೆಯುತ್ತಿರುವ ಪರಿಸರ ಮಾಲಿನ್ಯ, ಗಿಡ-ಮರಗಳ ಮಾರಣಹೋಮದಿಂದಾಗಿ ಇಂದು ಶುದ್ಧ ಗಾಳಿಯ ಪರಿಸರವನ್ನು ಹುಡುಕಾಡಬೇಕಾದ ಪರಿಸ್ಥಿತಿಯಿದೆ. ಹೀಗೆಯೇ ಮುಂದುವರಿದಲ್ಲಿ ಮುಂದೊಂದು ದಿನ ಉಸಿರಾಡಲು ಶುದ್ಧ ಆಮ್ಲಜನಕಕ್ಕಾಗಿ ಪರದಾಡಬೇಕಾದ ಸ್ಥಿತಿ ಬರಬಹುದು’ ಎಂಬ ದೂರದೃಷ್ಟಿ ಹೊಂದಿರುವ ಚಿಂತಕರೂ ಆದ ಶ್ರೀಷ ಕುಮಾರ್ ಅವರು ತನ್ನ ದುಡಿಮೆಯ ಹಣದಲ್ಲಿ ಪಾಲ್ತಾಡಿ ಗ್ರಾಮದ ಕುಂಜಾಡಿ ಎಂಬಲ್ಲಿ ಖರೀದಿಸಿದ್ದ ಒಂದು ಎಕರೆ ಜಾಗದಲ್ಲಿ ಅಶ್ವತ್ಥವನ ನಿರ್ಮಿಸಿದ್ದಾರೆ. ಇದು ಆರ್ಥಿಕ ಲಾಭಕ್ಕಾಗಿ ಅಲ್ಲ. ಇದು ಪರಿಸರದ ಕಾಳಜಿಗೋಸ್ಕರ, ಶುದ್ಧ ಗಾಳಿಗೋಸ್ಕರ ಎನ್ನುವುದು ಅವರ ಸಂದೇಶ.

ಶ್ರೀಷ ಕುಮಾರ್ 3 ವರ್ಷಗಳ ಹಿಂದೆಯಷ್ಟೇ ಕುಂಜಾಡಿಯಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದರು. ಅಲ್ಲಿ ಶುದ್ಧ ಪರಿಸರಕ್ಕೆ ಪೂರಕವಾದ ಗಿಡ ನೆಡುವ ಸಂಕಲ್ಪ ತೊಟ್ಟು 24 ಅಶ್ವತ್ಥ ಗಿಡ, ಪಚ್ಚೆ ಕರ್ಪೂರ, ನಾಗಸಂಪಿಗೆ, ನಾಗಲಿಂಗ, ಅಲ್ಲದೆ ಅಳಿವಿನ ಅಂಚಿನಲ್ಲಿರುವ ಗಿಡಗಳು ಸೇರಿದಂತೆ ಒಟ್ಟು 130 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಈ ಹಸಿರುವನ ಪುತ್ತೂರು ನಗರದಿಂದ 21 ಕಿ.ಮೀ. ದೂರದಲ್ಲಿದ್ದರೂ ತನ್ನ ಬಿಡುವಿನ ವೇಳೆಯಲ್ಲಿ ಅಲ್ಲಿಗೆ ಹೋಗಿ ಗಿಡಗಳ ಆರೈಕೆಯ ಜತೆಗೆ ಶುದ್ಧ ಪರಿಸರದೊಂದಿಗೆ ಬೆರೆಯುತ್ತಾರೆ.

ಗಿಡಗಳು ಜೀವ ಪಡೆದುಕೊಳ್ಳುವ ತನಕ ಪೈಪು ಮೂಲಕ ನೀರಿನ ವ್ಯವಸ್ಥೆ ಮಾಡಿ ಪೋಷಿಸಿರುವ ಅವರು ಅಗತ್ಯದ ಸಂದರ್ಭದಲ್ಲಿ ಟ್ಯಾಂಕರ್‌ನಲ್ಲಿ ನೀರುಣಿಸಿದ್ದಾರೆ. 30 ವರ್ಷಗಳಿಂದ ಮಳೆನೀರು ಸಂಗ್ರಹ, ಜಲಮೂಲ, ಶುದ್ಧ ಗಾಳಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿರುವ ಶ್ರೀಷಕುಮಾರ್ ಅವರು 3 ವರ್ಷದ ಹಿಂದೆಯೇ ಆಮ್ಲಜನಕದ ಅವಶ್ಯಕತೆ ಮುಂದೊಂದು ದಿನ ಬರಲಿದೆ ಎಂಬುವುದನ್ನು ಮನಗಂಡು ಹಸಿರುವನ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕುಂಜಾಡಿಯಲ್ಲಿ ಮಾತ್ರವಲ್ಲದೆ ತನ್ನ ಮೂಲ ಮನೆ ಇರುವ ಉಪ್ಪಿನಂಗಡಿ ಸಮೀಪದ ಇಳಂತಿಲದ ರಸ್ತೆ ಬದಿಗಳಲ್ಲಿ 24 ಅಶ್ವತ್ಥ ಗಿಡ, 2 ಗೋಳಿ ಗಿಡಗಳನ್ನು ನೆಟ್ಟು ಜಾಗೃತಿ ಮೂಡಿಸಿದ್ದಾರೆ. ಆರೋಗ್ಯವಂತ ಪರಿಸರ, ಸ್ವಸ್ಥ ಸಮಾಜದ ಕನಸಿನೊಂದಿಗೆ ಪರಿಸರ ಪೂರಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅವರು ವಿವಿಧೆಡೆ 500 ಕ್ಕಿಂತಲೂ ಹೆಚ್ಚು ಕಡೆ ಮಳೆ ಕೊಯ್ಲು ಬಗ್ಗೆ ಜಾಗೃತಿ ಉಪನ್ಯಾಸ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT