ಮಂಗಳೂರು: ಜಿಲ್ಲೆಯಲ್ಲಿ ಮೃತಪಟ್ಟಿರುವ 12 ಜನರಿಗೆ ಕೋವಿಡ್–19 ಇರುವುದು ಸೋಮವಾರ ದೃಢವಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಗರಿಷ್ಠ ಸಂಖ್ಯೆಯ ಮರಣ ಘೋಷಿಸಲಾಗಿದೆ.
ಮಂಗಳೂರು ತಾಲ್ಲೂಕಿನ 6, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ತಾಲ್ಲೂಕಿನ ತಲಾ ಒಬ್ಬರು ಹಾಗೂ ಇತರ ಜಿಲ್ಲೆಗಳ ಮೂವರು ಮೃತಪಟ್ಟಿದ್ದಾರೆ. ಅನಾರೋಗ್ಯದ ಸಮಸ್ಯೆಯಿಂದಾಗಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ಮಂದಿ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಅವರಿಗೆ ಕೋವಿಡ್–19 ಇರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ತಗ್ಗಿದ ಸೋಂಕು: ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ 300 ಗಡಿ ದಾಟುತ್ತಿದ್ದ ಕೋವಿಡ್–19 ಪ್ರಕರಣಗಳು ಸೋಮವಾರ ಸ್ವಲ್ಪ ತಗ್ಗಿದ್ದು, ಜಿಲ್ಲೆಯಲ್ಲಿ 270 ಜನರಿಗೆ ಸೋಂಕು ದೃಢವಾಗಿದೆ. ಈ ಮಧ್ಯೆ ಒಂದೇ ದಿನ 365 ಮಂದಿ ಗುಣಮುಖರಾಗಿದ್ದಾರೆ.
ಸೋಂಕಿತರ ಪೈಕಿ 70 ಪುರುಷರು ಹಾಗೂ 43 ಮಹಿಳೆಯರು ಸೇರಿದಂತೆ 113 ಜನರಿಗೆ ರೋಗ ಲಕ್ಷಣಗಳಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 85 ಪುರುಷರು, 72 ಮಹಿಳೆಯರು ಸೇರಿದಂತೆ 157 ಜನರಿಗೆ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಇವರಿಗೆ ಕೋವಿಡ್ ಕೇರ್ ಸೆಂಟರ್ ಮತ್ತು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
64 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದ್ದು, 99 ಜನರ ಸೋಂಕಿನ ಮೂಲವನ್ನು ಪತ್ತೆ ಮಾಡಲಾಗುತ್ತಿದೆ. 92 ಜನರಲ್ಲಿ ಶೀತ ಜ್ವರ (ಐಎಲ್‌ಐ) ಹಾಗೂ 14 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ)ಯಿಂದ ಸೋಂಕು ದೃಢವಾಗಿದೆ. ಬೇರೆ ರಾಜ್ಯದಿಂದ ಬಂದ ಒಬ್ಬರಿಗೆ ಸೋಂಕು ತಗಲಿದೆ. ಮಂಗಳೂರು ತಾಲ್ಲೂಕಿನಲ್ಲಿ 117, ಬಂಟ್ವಾಳ 90, ಪುತ್ತೂರು 24, ಸುಳ್ಯ ಮತ್ತು ಬೆಳ್ತಂಗಡಿ ತಲಾ 14, ಇತರ ಜಿಲ್ಲೆಗಳ 11 ಮಂದಿಗೆ ಕೋವಿಡ್–19 ದೃಢವಾಗಿದೆ.
367 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 367 ಮಂದಿ ಗುಣಮುಖರಾಗಿದ್ದು, ಅವರನ್ನು ಮನೆಗೆ ಕಳುಹಿಸಲಾಗಿದೆ.
ಹೋಂ ಐಸೋಲೇಷನ್‌ನಲ್ಲಿದ್ದ 294, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 71, ಕೋವಿಡ್ ಕೇರ್ ಸೆಂಟರ್‌ಗಳಲ್ಲಿದ್ದ ಇಬ್ಬರ ಗಂಟಲು ದ್ರವ ಮಾದರಿಯ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಕೋವಿಡ್ ಪರೀಕ್ಷೆಗೆ ದರ ನಿಗದಿ
ಮಂಗಳೂರು: ಸರ್ಕಾರದ ಆದೇಶದಂತೆ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ಆರ್‌ಟಿ-ಪಿ.ಸಿ.ಆರ್ ಪರೀಕ್ಷೆಗೆ ಮಾದರಿಯನ್ನು ಕಳುಹಿಸಿದರೆ, ಅದರ ಮೊತ್ತವನ್ನು ₹1,500 ನಿಗದಿ ಮಾಡಲಾಗಿದೆ. ಇದರಲ್ಲಿ ಸ್ಕ್ರೀನಿಂಗ್, ದೃಢೀಕರಣ ಪರೀಕ್ಷೆ ಜೊತೆಗೆ ಪಿಪಿಇ ಕಿಟ್ ಮೊತ್ತವು ಒಳಗೊಂಡಿರುತ್ತದೆ.
ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಮೊತ್ತ ₹2,500 ನಿಗದಿಯಾಗಿದ್ದು, ಇದರಲ್ಲಿ ಪಿಪಿಇ ಕಿಟ್ ದರವೂ ಒಳಗೊಂಡಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
ಕಾಸರಗೋಡು: 103 ಮಂದಿಗೆ ಕೋವಿಡ್
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 103 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, 97 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಐದು ಮಂದಿ ವಿದೇಶದಿಂದ ಹಾಗೂ ಒಬ್ಬರು ಹೊರರಾಜ್ಯದಿಂದ ಬಂದವರಾಗಿದ್ದಾರೆ. ಏಳು ತಿಂಗಳ ಮಗು ಸೇರಿದಂತೆ ಹತ್ತು ವರ್ಷದ ಕೆಳಗಿನ ಆರು ಮಕ್ಕಳಿಗೆ ಸೋಂಕು ದೃಢವಾಗಿದೆ.
ಜಿಲ್ಲೆಯಲ್ಲಿ 5,142 ಮಂದಿಗೆ ಕೋವಿಡ್–19 ದೃಢವಾಗಿದ್ದು, 4,188 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ 1,478 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ವಿ. ರಾಮದಾಸ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.