10 ವರ್ಷದಲ್ಲಿ ವೈಮಾನಿಕ ಕ್ಷೇತ್ರದ ಆಧುನೀಕರಣ: ಸಚಿವ ಸುರೇಶ್‌ ಪ್ರಭು

ಬುಧವಾರ, ಏಪ್ರಿಲ್ 24, 2019
23 °C

10 ವರ್ಷದಲ್ಲಿ ವೈಮಾನಿಕ ಕ್ಷೇತ್ರದ ಆಧುನೀಕರಣ: ಸಚಿವ ಸುರೇಶ್‌ ಪ್ರಭು

Published:
Updated:
Prajavani

ಮಂಗಳೂರು: ನಾಗರಿಕ ವಿಮಾನಯಾನ ಕ್ಷೇತ್ರದ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ರೂಪುರೇಷೆ ಸಿದ್ಧಪಡಿಸಿದ್ದು, ಮುಂದಿನ 10 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಹಾಗೂ ವಾಣಿಜ್ಯ ಸಚಿವ ಸುರೇಶ್‌ ಪ್ರಭು ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಜನವರಿಯಲ್ಲಿ ಜಾಗತಿಕ ವೈಮಾನಿಕ ಸಮ್ಮೇಳನ ನಡೆದಿದ್ದು, ಇದರಲ್ಲಿ ವಿಸ್ತೃತ ಚರ್ಚೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

ಕಳೆದ ಮೂರು ವರ್ಷಗಳಲ್ಲಿ 30ಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಇನ್ನೂ 100 ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಒಟ್ಟು 200 ವಿಮಾನ ನಿಲ್ದಾಣಗಳು ದೇಶದಾದ್ಯಂತ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ಜೆಟ್ ಏರವೇಸ್‌ನಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಕುರಿತು ಬ್ಯಾಂಕ್‌ಗಳ ಕಾರ್ಯಪ್ರವೃತ್ತವಾಗಿವೆ. ಪ್ರಯಾಣಿಕರು, ಉದ್ಯೋಗಿಗಳ ಹಿತದೃಷ್ಟಿಯಿಂದ ಜೆಟ್‌ ಏರವೇಸ್‌ ಅನ್ನು ಸಂಕಷ್ಟದಿಂದ ಪಾರು ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಉಡಾನ್‌ ಯೋಜನೆಯ ಮೂಲಕ ವಿಮಾನ ನಿಲ್ದಾಣಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಬಡಜನರಿಗೆ ಕೈಗೆಟುಕುವ ದರದಲ್ಲಿ ವಿಮಾನಯಾನ ಸೇವೆ ಲಭ್ಯವಾಗಿದೆ. ಕರ್ನಾಟಕವು ಉಡಾನ್‌ ಯೋಜನೆಯ ಬಹುದೊಡ್ಡ ಫಲಾನುಭವಿಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ರೈಲ್ವೆ ಅಭಿವೃದ್ಧಿಗೂ ಸಾಕಷ್ಟು ಒತ್ತು ನೀಡಿದೆ. ಐದು ವರ್ಷದಲ್ಲಿ ಒಟ್ಟು ₹8.59 ಲಕ್ಷ ಕೋಟಿ ಅನುದಾನವನ್ನು ರೈಲ್ವೆ ಒದಗಿಸಲಾಗಿದ್ದು, ಹಂತ ಹಂತವಾಗಿ ಯೋಜನೆಗಳನ್ನು ಪೂರ್ಣಗೊಳಿಸುವುದು ಹಾಗೂ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡಲಾಗಿದೆ. ಕರ್ನಾಟಕದಲ್ಲಿ ರೈಲ್ವೆ ಯೋಜನೆಗೆ ಹಿಂದೆಂದೂ ನೀಡದಷ್ಟು ಅನುದಾನವನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಭಾರತದ ವಿದೇಶಾಂಗ ನೀತಿ ಅತ್ಯುತ್ತಮವಾಗಿದೆ. ಜಾಗತಿಕ ಮಟ್ಟದಲ್ಲಿ ದೇಶದ ಗೌರವ ಹೆಚ್ಚಳವಾಗಿದೆ. ದೇಶಕ್ಕೆ ವಿದೇಶಗಳು ಅತ್ಯುನ್ನತ ಗೌರವ ನೀಡುತ್ತಿವೆ. ಇದರ ಜತೆಗೆ ವಿದೇಶಗಳ ಜತೆಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ 5 ವರ್ಷಗಳಲ್ಲಿ ಒಳ್ಳೆಯ ಕೆಲಸ ಆಗಿದೆ ಎಂದು ಹೇಳಿದರು.

ಉದ್ಯಮ ಕ್ಷೇತ್ರದಲ್ಲಿಯೂ ಮಹತ್ತರ ಕೆಲಸಗಳಾಗಿವೆ. 540 ಬಿಲಿಯನ್ ಡಾಲರ್ ದಾಖಲೆಯ ರಫ್ತು ಮಾಡಲಾಗಿದೆ. ಉದ್ಯಮಗಳ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕೃಷಿ ರಫ್ತು ನೀತಿ ಸಿದ್ಧಪಡಿಸಲಾಗಿದೆ. ಮತ್ಸ್ಯೋದ್ಯಮದ ಮೌಲ್ಯವರ್ಧನೆಗೆ ಗಮನ ನೀಡಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಸಲಾಗುತ್ತಿದೆ ಎಂದು ತಿಳಿಸಿದರು.

ಕಾಫಿ, ಮಸಾಲೆ, ಟೀ ಸೇರಿದಂತೆ ಹಲವು ಉತ್ಪನ್ನಗಳ ರಫ್ತಿಗೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು, ಚಿಕ್ಕಮಗಳೂರಿನಲ್ಲಿ ಮಸಾಲೆ ಪಾರ್ಕ್ ಮಾಡುವುದು ಸೇರಿದಂತೆ ರೈತರ ಎಲ್ಲ ರೀತಿಯ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಘಟಕದ ಅಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಉಪಾಧ್ಯಕ್ಷ ರವಿಶಂಕರ ಮಿಜಾರ್, ಶಾಸಕ ಡಿ.ವೇದವ್ಯಾಸ ಕಾಮತ್, ಮಾಜಿ ಶಾಸಕ ಯೋಗೀಶ ಭಟ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !