ಮಂಗಳೂರು: ತಮ್ಮ ಕೃಷಿ ಭೂಮಿಯ ಸುಮಾರು 3 ಎಕರೆಯಲ್ಲಿ ಕಾಡನ್ನು ಬೆಳೆಸಿ ಕಾಪಿಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಅವಿನಾಶ್ ಕೊಡಂಕಿರಿ.
‘ವರ್ಜಿನ್ ಫಾರೆಸ್ಟ್’ ಕಾನ್ಸೆಪ್ಟ್ ಮೂಲಕ 5 ಎಕರೆ ಜಮೀನಿನಲ್ಲಿ 3 ಎಕರೆಯಷ್ಟು ನೈಸರ್ಗಿಕ, ಖಾಸಗಿ ಕಾಡು ಬೆಳೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ನರಿಮೊಗರು ಗ್ರಾಮದವರಾದ ಅವಿನಾಶ್, ನರಿಮೊಗರು ಸರಸ್ವತಿ ವಿದ್ಯಾಮಂದಿರ ಎಂಬ ವಿದ್ಯಾಸಂಸ್ಥೆಯನ್ನು ಕಟ್ಟಿ ಅಲ್ಲಿಯೇ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
‘ವರ್ಜಿನ್ ಫಾರೆಸ್ಟ್ ಎಂದರೆ ಮಾನವ ಹಸ್ತಕ್ಷೇಪವಿಲ್ಲದೆ ಕಾಡನ್ನು ಅದರ ಪಾಡಿಗೆ ಬಿಟ್ಟುಬಿಡುವುದು. ಅದರಲ್ಲಿ ದೊರೆಯುವ ಉತ್ಪನ್ನಗಳನ್ನು ಬಳಸದೆ ಇರುವುದು. ಸೊಪ್ಪು, ತರಗೆಲೆ, ಕಟ್ಟಿಗೆ ಯಾವುದನ್ನೂ ಬಳಸದೆ ಅದರ ಪಾಡಿಗೆ ಬಿಟ್ಟುಬಿಡುತ್ತೇನೆ’ ಎನ್ನುತ್ತಾರೆ ಅವರು.
ಕೃಷಿಗೆ ಸಾಮಾನ್ಯವಾಗಿ ವನ್ಯಜೀವಿಗಳ ಉಪದ್ರವ ಇದ್ದೇ ಇರುತ್ತದೆ. ಅವುಗಳಿಗೆ ಬೇಕಾಗುವ ಆಹಾರ, ಆವಾಸ, ನೀರು ಮುಂತಾದ ಅಗತ್ಯತೆ ದೊರೆತರೆ ಅವು ನಮಗೆ ತೊಂದರೆ ಕೊಡುವುದಿಲ್ಲ. ಆ ಕಾರಣದಿಂದ ನನ್ನ ಕೃಷಿಯನ್ನು ರಕ್ಷಿಸಿಕೊಳ್ಳುವ ಉದ್ದೇಶ, ವನ್ಯಜೀವಿ ಪ್ರೇಮದಿಂದ ಜಮೀನಿನ ಬಳಿಯಿದ್ದ ಕಾಡನ್ನು ಸಂರಕ್ಷಿಸಿ ಅದನ್ನು ಬೆಳೆಸುವ ಕಾಯಕಕ್ಕೆ ಇಳಿದೆ ಎಂದು ವಿವರಿಸುತ್ತಾರೆ ಅವರು.
ಹಳೆ ಕಾಟುಮಾವು ಮರಗಳ ಸಂರಕ್ಷಣೆ ಜೊತೆಗೆ ಕೆಲವು ವರ್ಷಗಳಿಂದ ಕಾಟುಮಾವಿನ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ಕೆಲವು ಗಿಡಗಳು ಆಳೆತ್ತರಕ್ಕೆ ಬೆಳೆದಿದ್ದರೆ, ಕೆಲವು ಫಸಲು ಕೊಡುತ್ತಿವೆ. ಹೀಗೆ ನೆಟ್ಟ ಗಿಡಗಳ ಸಂಖ್ಯೆ 300 ದಾಟಿದೆ.
ತಾವು ಹೋದ ಕಡೆಗಳಿಂದೆಲ್ಲಾ ಲಭಿಸಿದ ಕಾಟು ಮಾವಿನ ಗೊರಟು ಸಂಗ್ರಹಿಸಿ ನಾಟಿ ಮಾಡುತ್ತಾರೆ. ಸಾಗರ, ತೀರ್ಥಹಳ್ಳಿ ಭಾಗದಿಂದ ಅಪ್ಪೆಮಿಡಿಯ ಗೊರಟು ತಂದು ಗಿಡ ಬೆಳೆಸಿದ್ದಾರೆ. ಹೀಗೆ 50ಕ್ಕೂ ಅಧಿಕ ತಳಿಯ ಕಾಟು ಮಾವಿನ ಗಿಡಗಳನ್ನು ನೆಟ್ಟಿದ್ದಾರೆ. ‘ನಿಮ್ಮ ಮನೆಯಲ್ಲಿ, ಊರಿನಲ್ಲಿ ಸಿಗುವ ಕಾಟುಮಾವಿನ ಗೊರಟು ನೀಡಿ’ ಎಂದು ಅವರು ಕೇಳುತ್ತಾರೆ.
ಅವಿನಾಶ್ ಅವರ ಕಾರ್ಯಕ್ಕೆ ಶಿಕ್ಷಕಿಯಾಗಿರುವ ಅವರ ಪತ್ನಿ ಹಾಗೂ ಮಕ್ಕಳು ಕೈ ಜೋಡಿಸುತ್ತಿದ್ದಾರೆ.
ಕಾಟುಮಾವಿನ ಸಂರಕ್ಷಣೆ ಜೊತೆಗೆ ಸ್ಥಳೀಯ ಕಾಡು ಹಣ್ಣುಗಳು, ಔಷಧೀಯ ಗಿಡ–ಮರಗಳ ಸಂರಕ್ಷಣೆಗೂ ಅವರು ಒತ್ತು ನೀಡಿದ್ದಾರೆ. ಅಬ್ಳುಕ, ಪುನರ್‌ಪುಳಿ, ಕೆತ್ತೆಪುಳಿ, ಜಾರಿಗೆಕಾಯಿ, ಹಲಸು, ಹೆಬ್ಬಲಸು, ದಾಲ್ಚಿನ್ನಿ, ಬೇಂಗ, ನೇರಳೆ, ಪುನರ್‌ಪುಳಿ, ಕಳ್ಳಿ, ನೆಲ್ಲಿ, ಜಾರಿಗೆ, ಪೆಜ, ಅಶೋಕ, ಸುರಗಿ, ಕಂಚಿಕಾಯಿ, ಅಣಿಲೆ, ರೆಂಜ ಹುಣಸೆ ಮೊದಲಾದ ಗಿಡ–ಮರಗಳು ಅವರ ಕಾಡಿನಲ್ಲಿ ರಾರಾಜಿಸುತ್ತಿವೆ. ಅಲ್ಲದೇ ಜಂಬುನೇರಳೆ, ಸೀತಾಫಲ, ಪೇರಳೆ, ಬೆಣ್ಣೆಹಣ್ಣು ಮುಂತಾದ ಹಣ‌್ಣಿನ ಮರಗಳಿಗೂ ಜಾಗ ನೀಡಿದ್ದಾರೆ. ವನ್ಯಜೀವಿಗಳಿಗೂ ಆಶ್ರಯ ತಾಣವಾಗಿರುವ ಅವರ ಕಾಡಿನಲ್ಲಿ ಅಳಿಲು, ಹಾವುಗಳು, ಬೆರು, ಅಲಂಕ್, ಹಾರ್ನ್‌ಬಿಲ್ ಮುಂತಾದ ಜೀವಿಗಳು ಅಪರೂಪಕ್ಕೊಮ್ಮೆ ಕಾಣಸಿಗುತ್ತವೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.