ಬೆಳ್ತಂಗಡಿ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿ: ಎಡನೀರು ಸ್ವಾಮೀಜಿ

ಬೆಳ್ತಂಗಡಿ: ‘ದೇವರು ಸರ್ವಾಂತ ರ್ಯಾಮಿ. ದೇವರನ್ನು ಅನುಭವದ ಮೂಲಕವೇ ಕಂಡುಕೊಳ್ಳಬಹುದು. ಹಾಗಿರುವಾಗ ದೇವಸ್ಥಾನ ಅಭಿವೃದ್ಧಿ ಕಾರ್ಯ ಭಕ್ತರ ಅನುಕೂಲಕ್ಕಾಗಿಯೇ ಆಗಿದೆ. ಊರಿನ ಧಾರ್ಮಿಕ ಪರಂಪರೆ ಸುಸ್ಥಿಯಲ್ಲಿಡಲು ಜನ ಪ್ರಯತ್ನಿಸಿದ್ದರಿಂದ ಸನಾತನ ಧರ್ಮದಲ್ಲಿ ಧಾರ್ಮಿಕ ಶ್ರದ್ಧೆ ಗಟ್ಟಿಯಾಗಿ ನಿಂತಿದೆ’ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ವರ್ಷಾವಧಿ ಜಾತ್ರೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು
‘ಯುವಜನರಲ್ಲಿ ನಾವಿಂದು ಧಾರ್ಮಿಕ ಶ್ರದ್ಧೆಯ ಕೊರತೆಯನ್ನು ಕಾಣು ತ್ತಿದ್ದೇವೆ. ಮಾತೆಯರು ಮನೆಯಲ್ಲಿ ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಿದಾಗ ಧರ್ಮ ಪ್ರಭಾವನೆಯಾಗುತ್ತದೆ. ದೇವಸ್ಥಾನದಲ್ಲಿ ಜಾತ್ರೋತ್ಸವ ಧಾರ್ಮಿಕ ಕಾರ್ಯಗಳು ನಡೆದಾಗ ನಮ್ಮ ಇತಿಮಿತಿಯಲ್ಲಿ ಸೇವೆಗಳು ನೀಡುವ ಮೂಲಕ ಸನಾತನ ಧರ್ಮದ ಜೀವಂತಿಕೆಯನ್ನ ಉಳಿಸೋಣ’ ಎಂದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ ಭುವನೇಶ್ ಗೇರುಕಟ್ಟೆ ಪ್ರಾಸ್ತಾವಿಕ ಮಾತನಾಡಿ, ‘ಕ್ಷೇತ್ರಕ್ಕೆ ಸ್ಥಳಾವಕಾಶದ ಕೊರತೆ ಎದುರಾದಾಗ ನೂತನ ಸಮಿತಿ ರಚನೆಯಾದ ಬಳಿಕ ಅಂದಾಜು 3.30 ಎಕರೆ ಜಾಗವನ್ನು ದೇವಸ್ಥಾನದ ಹೆಸರಿಗೆ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಸಭಾಭವನ, ಶೀಟಿನ ಮಾಡು, 2026ನೇ ವರ್ಷಕ್ಕೆ ಜೀರ್ಣೋದ್ಧಾರಕ್ಕೆ ಪೂರಕ ಆರ್ಥಿಕ ಕ್ರೋಡೀಕರಣಕ್ಕೆ ಚಿಂತನೆ ನಡೆಯಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶುಭಾಷಿಣಿ ಜನಾರ್ದನ್ ಗೌಡ, ಸದಸ್ಯರಾದ ಅರ್ಚಕ ರಾಘವೇಂದ್ರ ಆಸ್ರಣ್ಣ, ವಸಂತ ಮಜಲು, ಎಂ.ಜನಾರ್ದನ ಪೂಜಾರಿ, ದಿನೇಶ್ ಗೌಡ ಕೆ.ಕಲಾಯಿತೊಟ್ಟು, ಅಂಬಾ ಬಿ.ಆಳ್ವ, ವಿಜಯ ಎಚ್.ಪ್ರಸಾದ್, ಉಮೇಶ್ ಕೆ., ರಾಜೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ, ಶ್ರೀದುರ್ಗಾ ಮಾತೃಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್ ಇದ್ದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಪೆರ್ಬುಂಡ ವಂದಿಸಿದರು.
ರಾತ್ರಿ ಮಹಾರಥೋತ್ಸವ: ಶುಕ್ರವಾರ ಸಂಜೆ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಯುವುದು, ರಥಕಲಶ ನಡೆದು ರಾತ್ರಿ 9ರಿಂದ ದೇವರ ಉತ್ಸವ ಬಲಿ ಹೊರಟು, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, ಬಳಿಕ ಮಹಾರಥೋತ್ಸವ ನಡೆದು ಶ್ರೀಭೂತ ಬಲಿ- ಕವಾಟ ಬಂಧನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಹಿನ್ನೆಲೆ ಗಾಯಕಿ ಕಲಾವತಿ ದಯಾನಂದ ಉಡುಪಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.