ಮಂಗಳವಾರ, ನವೆಂಬರ್ 12, 2019
19 °C
ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಪ್ರದಾನ

ಆತ್ರೇಯೀಗೆ ‘ಕಲಾಮಣಿ’, ಅನೀಶ್‌ಗೆ ‘ಮಣಿ ಕೃಷ್ಣಸ್ವಾಮಿ’ ಪ್ರಶಸ್ತಿ

Published:
Updated:
Prajavani

ಮಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತದ ಯುವ ಪ್ರತಿಭೆಗಳಾದ ಪುತ್ತೂರಿನ ಅನೀಶ್ ವಿ. ಭಟ್ ಹಾಗೂ ಕಾರ್ಕಳದ ಆತ್ರೇಯೀ ಕೃಷ್ಣಾ ಅವರಿಗೆ ಮಣಿಕೃಷ್ಣ ಅಕಾಡೆಮಿ ಕೊಡಮಾಡುವ ‘ಯುವ ಕಲಾಮಣಿ–2019’ ಮತ್ತು ‘ಡಾ.ಮಣಿ ಕೃಷ್ಣ ಸ್ವಾಮಿ’ ಪ್ರಶಸ್ತಿಯನ್ನು ನಗರದ ಪುರಭವನದಲ್ಲಿ ನಡೆಯುತ್ತಿರುವ ‘ರಾಗ ಸುಧಾರಸ –ರಾಷ್ಟ್ರೀಯ ಸಂಗೀತೋತ್ಸವ’ದಲ್ಲಿ ಶನಿವಾರ ಕ್ರಮವಾಗಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುರಸ್ಕೃತರು, ‘ಸಂಗೀತ ನೀಡಿ ಕಲಿಸಿದ ಗುರುಗಳು, ಪ್ರೋತ್ಸಾಹಿಸಿ –ಮಾರ್ಗದರ್ಶನ ನೀಡಿದ ಪೋಷಕರು, ಬೆಂಬಲಿಸಿದ ಮಾರ್ಗದರ್ಶಕರು ಹಾಗೂ ಸದಾ ಪ್ರೇರಣೆ ನೀಡುತ್ತಿರುವ ನಿಮಗೆಲ್ಲರಿಗೂ ಈ ಗೌರವ ಸಲ್ಲಬೇಕು’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ, ‘ಸಾಹಿತ್ಯವನ್ನು ಸಂಗೀತ ಸಂಪನ್ನಗೊಳಿಸುತ್ತಿದೆ. ಸಂಗೀತ ಎಂದರೆ ಸುಲಲಿತ. ಆದರೆ, ಅದನ್ನು ಅಭ್ಯಾಸದ ಮೂಲಕ ಸಾಧಿಸಬೇಕು. ಅಭ್ಯಾಸವಿಲ್ಲದೇ ಕಲೆ ಕರಗತ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹ ಅಭ್ಯಾಸಕ್ಕೆ ಪರಿಶ್ರಮ ಮತ್ತು ತ್ಯಾಗ ಅತೀ ಅಗತ್ಯ’ ಎಂದರು.

‘ಆತ್ಮದ ಜೊತೆ ಸೋಪಾನವು ಸಂಗೀತದಿಂದ ಸಾಧ್ಯ ಎಂದು ಅಧ್ಯಾತ್ಮದಲ್ಲಿದೆ. ಸಂಗೀತದಲ್ಲಿ ಸಾಧನೆ ಮಾಡಲು ರಾಗ ಮತ್ತು ತಾಳದ ಅನುಭವ ಬೇಕು. ಇದು ಜೀವ ಮತ್ತು ದೇವ ನಡುವಿನ ಸಂಬಂಧ ಸಾಧಿಸಿದಂತೆ’ ಎಂದರು.

‘ನೋಡುವುದು ಮತ್ತು ಕಾಣುವುದು ವಿಭಿನ್ನವಾಗಿದೆ. ನೀವು ನೋಡಿರುವುದನ್ನು ಕಾಣದೇ ಇರಬಹುದು’ ಎಂದು ವ್ಯಾಖ್ಯಾನಿಸಿದ ಅವರು, ‘ಹೊರಗಣ್ಣಿನಿಂದ ನೋಡುವುದು. ಒಳಗಣ್ಣಿನಿಂದ ಕಾಣುವುದು. ಸಾಹಿತ್ಯವನ್ನು ನೀವು ನೋಡಿ, ಬಳಿಕ ಕಾಣಲು ಯತ್ನಿಸಿದರೆ,  ಸಂಗೀತವನ್ನು ಕೇವಲ ಕಾಣಲು ಮಾತ್ರ ಸಾಧ್ಯ’ ಎಂದು ವಿಶ್ಲೇಷಿಸಿದರು. 

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ‘ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಕಾಡೆಮಿಯ ಕಾರ್ಯವು ಅಭಿನಂದನೀಯ’ ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್, ಗೌರವ ಸಲಹಾ ಮಂಡಳಿಯ ವಿ. ಅರವಿಂದ ಹೆಬ್ಬಾರ್, ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಜೆ.ಡಿ.ವೀರಪ್ಪ, ಪುತ್ತೂರು ‘ಬಹುವಚನಂ’ನ ಡಾ.ಶ್ರೀಶಕುಮಾರ್ ಇದ್ದರು.  

ಪ್ರತಿಕ್ರಿಯಿಸಿ (+)