ಭಾನುವಾರ, ಡಿಸೆಂಬರ್ 8, 2019
21 °C

ಅಯೋಧ್ಯೆ ವಿವಾದ: ಕರಪತ್ರ ಹಂಚಿದ ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ಬಾಬರಿ ಮಸೀದಿ ತೀರ್ಪು ವಿಚಾರದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ ಎಂಬ ಬರಹವುಳ್ಳ ಕರಪತ್ರವನ್ನು ಮನೆಗಳಿಗೆ ತೆರಳಿ ಹಂಚುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕೆ.ಸಿ ರೋಡ್ ನಿವಾಸಿಗಳಾದ ಸಿನಾನ್ ಮತ್ತು ಹಕೀಂ ಬಂಧಿತರು. ಅಯೋಧ್ಯೆಯ ರಾಮ ಜನ್ಮಭೂಮಿ– ಬಾಬರಿ ಮಸೀದಿ ವ್ಯಾಜ್ಯದ ತೀರ್ಪಿನಲ್ಲಿ ಮುಸ್ಲಿಮರಿಗೆ ಅನ್ಯಾಯವಾಗಿದೆ ಎನ್ನುವ ಮುದ್ರಿತ ಕರಪತ್ರಗಳನ್ನು ಕೆ.ಸಿ.ರೋಡ್‌ ಸಮೀಪದ ಮನೆಗಳಿಗೆ ಹಂಚುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗಳ ವಿರುದ್ಧ ಕೋಮು ಪ್ರಚೋದನೆ, ಶಾಂತಿ ಭಂಗ, ಧರ್ಮಗಳ ನಡುವಿನ ಸಂಘರ್ಷಕ್ಕೆ ಯತ್ನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ಬಿಡುಗಡೆಗೊಳಿಸುವಂತೆ ಎಸ್‌ಡಿಪಿಐ ಕಾರ್ಯಕರ್ತರು ಉಳ್ಳಾಲ ಠಾಣೆ ಎದುರು ಜಮಾಯಿಸಿದ್ದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಎಸ್‌ಆರ್‌ಪಿ, ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ಉಳ್ಳಾಲದಲ್ಲಿ ನಿಯೋಜಿಸಲಾಗಿದೆ.

ಪ್ರತಿಕ್ರಿಯಿಸಿ (+)