ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿಗೆ ಆಯುಷ್ ಸ್ಪೋರ್ಟ್ಸ್‌ ಮೆಡಿಸಿನ್‌ ಸೆಂಟರ್‌

ಆಯುಷ್ ಆಸ್ಪತ್ರೆ ಉದ್ಘಾಟಿಸಿದ ಸಚಿವ ಸರ್ಬಾನಂದ ಸೋನೊವಾಲ್‌ ಭರವಸೆ
Last Updated 26 ಸೆಪ್ಟೆಂಬರ್ 2021, 3:24 IST
ಅಕ್ಷರ ಗಾತ್ರ

ಮಂಗಳೂರು: ಆಯುರ್ವೇದ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ನಗರಕ್ಕೆ ಆಯುಷ್ ಸ್ಪೋರ್ಟ್ಸ್‌ ಮೆಡಿಸಿನ್‌ ಸೆಂಟರ್‌ ಸ್ಥಾಪನೆಗೆ ಕೇಂದ್ರ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ ಎಂದು ಕೇಂದ್ರದ ಬಂದರು, ಜಲಸಾರಿಗೆ, ಹಡಗು ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಭರವಸೆ ನೀಡಿದರು.

ಶನಿವಾರ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಸಂಯುಕ್ತ ಆಯುಷ್ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದ ತ್ರಿಶ್ಯೂರ್‌ನಲ್ಲಿ ಇರುವಂತೆಯೇ ಮಂಗಳೂರಿಗೂ ಆಯುಷ್ ಸ್ಪೋರ್ಟ್ಸ್‌ ಮೆಡಿಸಿನ್‌ ಸೆಂಟರ್‌ ಮಂಜೂರು ಮಾಡುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸಚಿವ ಸರ್ಬಾನಂದ, ‘ಹುಸಿ ಭರವಸೆ ನೀಡುವುದಿಲ್ಲ. ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ’ ಎಂದರು.

ಪ್ರಾಕೃತಿಕ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಹಾಗೂ ಅವಲಂಬನೆ ಇರುವ ಕಾರಣ, ಇಲ್ಲಿನ ಜನರ ಆಶಯದಂತೆ ಆಯುಷ್ ಸ್ಪೋರ್ಟ್ಸ್‌ ಮೆಡಿಸಿನ್‌ ಸೆಂಟರ್‌ ಅನ್ನು ಮಂಗಳೂರಿಗೆ ಮಂಜೂರು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸಂಯುಕ್ತ ಆಯುಷ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಅವರಲ್ಲಿ ವಿಶೇಷವಾದ ಪ್ರೀತಿ ತೋರಬೇಕು. ಕಟ್ಟಡ ನಿರ್ಮಾಣವಾಗಿದ್ದು, ಇದು ಅಭಿವೃದ್ದಿ ಸಂಕೇತ. ಇಲ್ಲಿನ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ಹಾಗೂ ಆಸ್ಪತ್ರೆಯನ್ನು ಸ್ಪಚ್ಛವಾಗಿ ಇಟ್ಟುಕೊಳ್ಳುವುದು ಉತ್ತಮ ಆಡಳಿತದ ಸಂಕೇತ ಎಂದು ವಿಶ್ಲೇಷಿಸಿದರು.

‘ವೈದ್ಯ ವೃತ್ತಿ ಪರಮ ಪವಿತ್ರ. ಒಬ್ಬ ರೋಗಿ ಆಸ್ಪತ್ರೆಗೆ ದಾಖಲಾದರೆ, ಆಸ್ಪತ್ರೆಯಲ್ಲಿನ ಉತ್ತಮ ವಾತಾವರಣ ಅವನಲ್ಲಿ ರೋಗ ಗುಣಮುಖವಾಗುವ ಆತ್ಮವಿಶ್ವಾಸ ತುಂಬಬೇಕು. ಈ ಆಸ್ಪತ್ರೆಗೆ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಇನ್ನೂ ಉತ್ತಮ ನೆರವು ನೀಡಲಾಗುವುದು. ಆಯುಷ್ ಮಂತ್ರಾಲಯದ ಉದ್ದೇಶಗಳನ್ನು ಜನತೆ ತಿಳಿದುಕೊಳ್ಳಬೇಕು ಎನ್ನುವುದು ನಮ್ಮ ಇಚ್ಛೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಎನ್‌ಎಂಪಿಟಿ ಅಧ್ಯಕ್ಷ ಡಾ.ಎ.ವಿ. ರಮಣ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತೀನ್ ಕುಮಾರ್, ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶ್ಯಾನ್‌ಭೋಗ್ ಸ್ಥಳೀಯ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಆಯುಷ್ ವೈದ್ಯರು ಹಾಗೂ ಸಿಬ್ಬಂದಿ, ಕೇಂದ್ರ ಸಚಿವರನ್ನು ಸನ್ಮಾನಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಮಹಮದ್ ಇಕ್ಬಾಲ್ ಸ್ವಾಗತಿಸಿದರು. ಶೋಭಾರಾಣಿ ವಂದಿಸಿದರು.

‘ಆಯುಷ್‌ನ ಎಲ್ಲ ಚಿಕಿತ್ಸೆ ಲಭ್ಯ’

ಹೊರರೋಗಿ ವಿಭಾಗವು ಇಂದಿನಿಂದ ಕಾರ್ಯಾರಂಭವಾಗುತ್ತಿದ್ದು, ಆಯುಷ್‌ನ ಎಲ್ಲ ಪದ್ಧತಿಗಳಾದ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹೋಮಿಯೋಪತಿಗಳ ವಿಶೇಷ ಚಿಕಿತ್ಸಾ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಲಭ್ಯವಾಗಲಿದೆ. ಎಲ್ಲ ಆಯುಷ್ ಪದ್ಧತಿಗಳು ಹಾಗೂ ಆರೋಪತಿ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿರುವ ದೇಶದ ಮೊದಲ ಆಸ್ಪತ್ರೆ ಇದಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

ಈ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯ ಪಂಚಕರ್ಮ, ಜಪ, ಕಾರಸವ ಅಭ್ಯಂಗ ಮುಂತಾದ ಚಿಕಿತ್ಸೆ ಲಭಿಸಲಿವೆ. ನ್ಯಾಚುರೋಪತಿ ಪದ್ಧತಿಯ ಜಲಚಿಕಿತ್ಸೆ, ಆಕ್ಯೂಪಂಚರ್, ಆಕ್ಯುಪ್ರೆಶರ್, ಕಲರ್‌ಥೆರಪಿ, ಪಿಸಿಯೋಥೆರಪಿ ಮುಂತಾದ ಚಿಕಿತ್ಸೆಗಳು ಹಾಗೂ ಯುನಾನಿ ಚಿಕಿತ್ಸಾ ಪದ್ಧತಿಯಲ್ಲಿ ಫಲಕ, ಹಿಜಾಮ (ಗಜೆಮಿನಲ್ ಥೆರಪಿ) ಮುಂತಾದ ಪದ್ಧತಿ ಇಲ್ಲಿ ಲಭ್ಯವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT