ಸೋಮವಾರ, ಸೆಪ್ಟೆಂಬರ್ 26, 2022
20 °C
ಸಾತಂತ್ರ್ಯದ ಅಮೃತ ಮಹೋತ್ಸವ– ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ಉದಯ್‌ ಕುಮಾರ್‌ ಕಳವಳ

ಪ್ರಜಾಪ್ರಭುತ್ವ ದೇಶದಲ್ಲಿ ದುಬಾರಿಯಾಗುತ್ತಿದೆ ಸಾತಂತ್ರ್ಯ: ಉದಯ್‌ ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪಾಂಡೇಶ್ವರದ ಜವಹರಲಾಲ್‌ ನೆಹರೂ ಪ್ರತಿಮೆ ಬಳಿಯಿಂದ ಲಾಲ್‌ಬಾಗ್‌ನ ಮಹಾತ್ಮ ಗಾಂಧಿ ಪ್ರತಿಮೆವರೆಗೆ ಬುಧವಾರ ಪಾದಯಾತ್ರೆ ನಡೆಯಿತು.

ಕಾಂಗ್ರೆಸ್‌ ಪಕ್ಷದ ಪ್ರಮುಖರು, ಭಾರತ ಸೇವಾದಳದ ಕಾರ್ಯಕರ್ತರು, ಸಾರ್ವಜನಿಕರು ಬಿಳಿ ಸಮವಸ್ತ್ರ, ಗಾಂಧಿ ಟೋಪಿ ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಿದರು. ಪಾದಯಾತ್ರೆಯುದ್ದಕ್ಕೂ ‘ಭಾರತ ಮಾತೆಗೆ ಜಯವಾಗಲಿ’ ಘೋಷಣೆ ಮುಗಿಲು ಮುಟ್ಟಿತು

ನೆಹರೂ ಪ್ರತಿಮೆಗೆ ಹೂವು ಅರ್ಪಿಸಿ ಪಾದಯಾತ್ರೆ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯ್‌ ಕುಮಾರ್‌ ಇರ್ವತ್ತೂರು, ‘ನಾವು ಅಡುಗೆ ಅನಿಲ, ತೈಲ ದರ ಹೆಚ್ಚಳದ ಬಗ್ಗೆ ಮಾತ್ರ ತಲೆ ಕೆಡಿಸಿಕೊಂಡಿದ್ದೇವೆ. ಆದರೆ,  ಹಿರಿಯರು ಕಷ್ಟಪಟ್ಟು ಗಳಿಸಿದ ದೇಶದ ಸ್ವಾತಂತ್ರ್ಯವೂ ದುಬಾರಿಯಾಗುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೂ ಯಾವುದೇ ವಿಚಾರವನ್ನು ನಿಷ್ಠುರವಾಗಿ ಹೇಳುವ ಸ್ಥಿತಿ ಇಂದು ಉಳಿದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಮ್ಮ ಹಿಂದಿನ ತಲೆಮಾರಿನವರ ಬಲಿದಾನದಿಂದಾಗಿ ನಮ್ಮ ಪೀಳಿಗೆಯವರು ಉತ್ತಮ ವಿದ್ಯಾಭ್ಯಾಸ, ಉದ್ಯೋಗ ಪಡೆಯುವಂತಾಯಿತು. ಮುಂದಿನ ಪೀಳಿಗೆಗೆ ನಾವು ಏನನ್ನು ಬಿಟ್ಟು ಹೋಗುತ್ತೇವೆ ಎಂಬುದೂ ಮುಖ್ಯ. ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಯಂಚಾಲಿತ ಯಂತ್ರವಲ್ಲ. ಜನರ ಸಂಕಟಗಳಿಗೆ ಧ್ವನಿಯಾಗುವ ನಿರಂತರ ಚಳವಳಿಗಳ ಮೂಲಕ ಅದನ್ನು ಉಳಿಸಿಕೊಳ್ಳಬೇಕು. ಜನಪರ ಚಳವಳಿಗಳ ಮೂಲಕವೇ ಪ್ರತಂತ್ರ ವ್ಯವಸ್ಥೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬಲ್ಲುದು’ ಎಂದರು.

‘ಈಗಿನ ತಲೆಮಾರಿನ ಕೆಲವರು ಮಹಾತ್ಮ ಗಾಂಧಿ ಹಾಗೂ ನೆಹರೂ  ಹಾಗೆ, ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು ಎಂದು ಹೇಳುವುದನ್ನು ಕೇಳುತ್ತಿದ್ದೇವೆ. ದೇಶ ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲಿತ್ತು ಎಂಬುದರ ಕಿಂಚಿತ್‌ ಅರಿವೂ ಅಂತಹವರಿಗಿಲ್ಲ. ನುಡಿದಂತೆ ನಡೆದ ಗಾಂಧೀಜಿ ಹಿಂದೆ ಇಡೀ ದೇಶವೇ ಹೆಜ್ಜೆ ಹಾಕಿತ್ತು ಎಂಬುದನ್ನು ಮರೆಯಬಾರದು’ ಎಂದರು.

ನೆಹರೂ ಪ್ರತಿಮೆಯಿಂದ ಆರಂಭವಾಗುವ ಇಂದಿನ ಪಾದಯಾತ್ರೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೂ ಗೌರವ ಸಲ್ಲಿಸಲಾಗುತ್ತದೆ. ಗಾಂಧಿ ಪ್ರತಿಮೆಯ ಬಳಿ ಸಂಪನ್ನಗೊಳ್ಳುತ್ತದೆ. ಇದು ಸಾಂಕೇತಿಕವೂ ಹೌದು. ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ ಮೂಲಕ ನೆಹರೂ ಅವರು ದೇಶದ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದ್ದರು. ಅಂಬೇಡ್ಕರ್‌ ಅವರು  ಜಾತಿ, ಮತ, ಪಂಗಡಗಳ ಬೇಧವನ್ನು ಮೆಟ್ಟಿ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವಂತಹ ಸಂವಿಧಾನವನ್ನು ಕೊಟ್ಟರು. ಹೇಗೆ ಬದುಕಬೇಕೆಂದು ಗಾಂಧೀಜಿ ತೋರಿಸಿಕೊಟ್ಟರು. ದೇಶದ ಭವಿತವ್ಯಕ್ಕಾಗಿ ಈ ಮೂವರ ಪ್ರತಿಪಾದಿಸಿದ ಮೌಲ್ಯಗಳನ್ನು ಪಾಲಿಸುವ ಅನಿವಾರ್ಯ ಇದೆ’ ಎಂದರು.

ಕಾಂಗ್ರೆಸ್ ಮುಖಂಡ ಜೆ.ಆರ್‌.ಲೊಬೊ, ‘ದೇಶದ ಸ್ವಾತಂತ್ರ್ಯದ ರಕ್ಷಣೆಗಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ನಮ್ಮ ಪೂರ್ವಜರು ಕಷ್ಟುಪಟ್ಟು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಜತನವಾಗಿ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ಪಾದಯಾತ್ರೆಯಲ್ಲಿ  ಕೆಪಿಸಿಸಿ ಪದಾಧಿಕಾರಿಗಳಾದ ಐವನ್ ಡಿಸೋಜ, ಪಿ.ವಿ.ಮೋಹನ್, ಜಿ.ಎ.ಬಾವಾ, ಇನಾಯತ್ ಆಲಿ, ಮಿಥುನ್ ರೈ, ಕಳ್ಳಿಗೆ ತಾರಾನಾಥ ಶೆಟ್ಟಿ, ಪಾಲಿಕೆ ಸದಸ್ಯ ಶಶಿಧರ್ ಹೆಗ್ಡೆ, ಅಬ್ದುಲ್‌ ಸಲಿಂ, ಅಬ್ದುಲ್ ರವೂಫ್, ಪ್ರವೀಣಚಂದ್ರ ಆಳ್ವ, ನವೀನ್ ಡಿಸೋಜ, ಭಾಸ್ಕರ್ ಮೊಯಿಲಿ, ಪ್ರಕಾಶ್ ಸಾಲ್ಯಾನ್, ಉಮೇಶ್ ದಂಡಕೇರಿ, ಶಾಲೆಟ್ ಪಿಂಟೊ, ಜೋಕಿಂ ಡಿಸೋಜ, ಜಸಿಂತ ಆಲ್ಫ್ರೆಡ್‌, ಸುರೇಶ್ ಬಲ್ಲಾಳ್, ವಿಶ್ವಾಸ್ ದಾಸ್, ಟಿ.ಕೆ. ಸುಧೀರ್, ಶುಭೋದಯ ಆಳ್ವ, ಅಬ್ಬಾಸ್ ಆಲಿ, ದೀಪಕ್ ಪೂಜಾರಿ, ದುರ್ಗಾ ಪ್ರಸಾದ್, ಸದಾಶಿವ ಅಮೀನ್, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ರಮಾನಂದ್ ಪೂಜಾರಿ, ಶಾಂತಲ ಗಟ್ಟಿ, ಚಂದ್ರಕಲಾ ಜೋಗಿ, ಉದಯ ಕುಂದರ್, ಹುಸೈನ್ ಬೋಳಾರ್, ಸದಾನಂದ್, ಅಪ್ಪಿ, ಹೊನ್ನಯ್ಯ, ಶಂಸುದ್ದೀನ್, ಲ್ಯಾನ್ಸಿ ಲಾಟ್ ಪಿಂಟೊ, ಸಂತೋಷ್ ಶೆಟ್ಟಿ, ಮೊಹಮ್ಮದ್ ಕುಂಜತ್ತಬೈಲ್, ಗಿರೀಶ್ ಶೆಟ್ಟಿ, ಚೇತನ್ ಉರ್ವಾ, ಮಂಜುಳಾ ನಾಯಕ್ ಮೊದಲಾದವರು ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು