ಸೋಮವಾರ, ನವೆಂಬರ್ 18, 2019
20 °C
ಯುವಕ, ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು

ಪುತ್ತೂರು: ಯುವ ಜೋಡಿ ಮೇಲೆ ಬಜರಂಗದಳ ದಾಳಿ

Published:
Updated:

ಪುತ್ತೂರು: ನಗರದ ಲಾಡ್ಜ್‌ ಒಂದರಲ್ಲಿ ಭಾನುವಾರ ಜೊತೆಯಾಗಿದ್ದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ಮಾಡಿ, ವಿಚಾರಣೆ ನಡೆಸಲು ಯತ್ನಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು, ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ.

ಪುತ್ತೂರಿನ ಸಾಮೆತ್ತಡ್ಕದ ಹಿಂದೂ ಯುವತಿ ಮತ್ತು ಮುಂಬೈನ ಅಬ್ದುಲ್‌ ಹಮೀದ್‌ ಎಂಬ ಮುಸ್ಲಿಂ ಯುವಕ ಪೊಲೀಸರ ವಶದಲ್ಲಿರುವವರು. ಇಬ್ಬರೂ 18 ವರ್ಷ ವಯಸ್ಸಿನವರು. ಯುವಕನ ಪೋಷಕರು ಮುಂಬೈನಲ್ಲಿದ್ದಾರೆ. ಯುವತಿಯ ಪೋಷಕರು ರಾಜಸ್ಥಾನದವರಾಗಿದ್ದು, 20 ವರ್ಷಗಳಿಂದ ಪುತ್ತೂರಿನ ಸಾಮೇತಡ್ಕದಲ್ಲಿ ನೆಲೆಸಿದ್ದಾರೆ.

ಇಬ್ಬರೂ ಸಾಮಾಜಿಕ ಮಾಧ್ಯಮ ‘ಇನ್‌ಸ್ಟಾಗ್ರಾಂ’ ಮೂಲಕ ಪರಿಚಿತರಾಗಿದ್ದರು. ಅಬ್ದುಲ್ ಹಮೀದ್ ಶನಿವಾರ ಪುತ್ತೂರಿಗೆ ಬಂದು ಇಲ್ಲಿನ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದ. ಯುವತಿ ಭಾನುವಾರ ಮಧ್ಯಾಹ್ನ ಸಾಮೇತಡ್ಕದಿಂದ ಬಂದು ಲಾಡ್ಜ್‌ನಲ್ಲಿ ಯುವಕನಿದ್ದ ಕೊಠಡಿಗೆ ತೆರಳಿದ್ದಳು.

ಯುವಕ ಮತ್ತು ಯುವತಿ ಲಾಡ್ಜ್‌ನ ಕೊಠಡಿಯಲ್ಲಿರುವ ಮಾಹಿತಿ ಬಜರಂಗದಳ ಮುಖಂಡರಿಗೆ ತಲುಪಿತ್ತು. ತಕ್ಷಣವೇ ದೌಡಾಯಿಸಿ ಬಂದ ಸಂಘಟನೆಯ ಹಲವು ಸದಸ್ಯರು ಕೊಠಡಿಯ ಬಾಗಿಲು ತೆರೆಸಿ ಒಳಕ್ಕೆ ಹೋದರು. ಯುವಕ, ಯುವತಿಯನ್ನು ಸುತ್ತುವರಿದು ಪ್ರಶ್ನಿಸಲಾರಂಭಿಸಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪುತ್ತೂರು ಠಾಣೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಕರೆದೊಯ್ದರು.

ಯುವತಿಯ ಪೋಷಕರನ್ನು ಕರೆಸಿರುವ ಪೊಲೀಸರು ಅವರ ಎದುರಿನಲ್ಲೇ ವಿಚಾರಣೆ ನಡೆಸಿದ್ದಾರೆ. ಯುವಕನನ್ನು ಪುತ್ತೂರು ಠಾಣೆಯಲ್ಲಿ ಮತ್ತು ಯುವತಿಯನ್ನು ಪುತ್ತೂರು ಮಹಿಳಾ ಠಾಣೆಯಲ್ಲಿ ಇರಿಸಲಾಗಿದೆ. ಪುತ್ತೂರಿಗೆ ಬರುವಂತೆ ಯುವಕನ ಪೋಷಕರಿಗೂ ಪೊಲೀಸರು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಬಾಬು, ‘ಲಾಡ್ಜ್‌ನಲ್ಲಿದ್ದ ಯುವಕ, ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಲಾಗುತ್ತಿದೆ. ಅವರಿಂದ ಯಾವುದೇ ತಪ್ಪುಗಳಾಗದೇ ಇರುವುದು ಕಂಡುಬಂದರೆ ಪೋಷಕರೊಂದಿಗೆ ಕಳುಹಿಸಿಕೊಡಲಾಗುವುದು’ ಎಂದರು.

ಪ್ರತಿಕ್ರಿಯಿಸಿ (+)