ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗ, ಬಲಿದಾನದ ಬಕ್ರೀದ್‌ ಸರಳ ಆಚರಣೆ

ಕೋವಿಡ್ ಮಾರ್ಗಸೂಚಿ ಪಾಲನೆ, ಸಾಮೂಹಿಕ ಪ್ರಾರ್ಥನೆ: ಹಸ್ತಲಾಘವ, ಆಲಿಂಗನಕ್ಕಿಲ್ಲ ಅವಕಾಶ
Last Updated 22 ಜುಲೈ 2021, 4:25 IST
ಅಕ್ಷರ ಗಾತ್ರ

ಮಂಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಅನ್ನು ಜಿಲ್ಲೆಯಾದ್ಯಂತ ಬುಧವಾರ ಆಚರಿಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಬ್ರಕೀದ್ ಆಚರಿಸಲಾಯಿತು. ಬೆಳಿಗ್ಗೆ ಕೆಲವು ಮಸೀದಿಗಳಲ್ಲಿ ಈದ್ ನಮಾಜ್ ಮತ್ತು ಖುತ್ಬಾ ನಡೆಯಿತು. ಕೋವಿಡ್‌ ಕಾರಣಕ್ಕೆ ಕಳೆದ ಬಾರಿ ಸರ್ಕಾರ ನಿರ್ಬಂಧ ಹೇರಿದ್ದರಿಂದ ಸರಳವಾಗಿ ಆಚರಿಸಲಾಗಿತ್ತು. ಆದರೆ ಮಸೀದಿಗಳಲ್ಲಿ ಶೇ 50 ರಷ್ಟು ಮೀರದಂತೆ ಹಂತ ಹಂತವಾಗಿ ಸಾಮೂಹಿಕ ನಮಾಜ್, ಈದ್ ಖುತ್ಬಾ ನೆರವೇರಿಸುವಂತೆ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಿಂದ ತುಸು ಉತ್ಸಾಹ ಕಂಡು ಬಂತು.

65 ವರ್ಷ ಮೇಲಿನವರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ಪ್ರವೇಶ ಇರಲಿಲ್ಲ. ಮಸೀದಿಗೆ ಪ್ರವೇಶಿಸುವ ಮುನ್ನ ಎಲ್ಲರ ಉಷ್ಣಾಂಶ ತಪಾಸಣೆ, ಸ್ಯಾನಿಟೈಸರ್‌, ಮಾಸ್ಕ್‌ ಧಾರಣೆ ಕಡ್ಡಾಯ ಮಾಡಲಾಗಿತ್ತು. ನಮಾಜ್ ವೇಳೆ ಸುರಕ್ಷಿತ ಅಂತರ ಪಾಲಿಸಲಾಗಿತ್ತು. ಮನೆಯಿಂದ ಕೊಂಡೊಯ್ದ ಮುಸಲ್ಲಾ ಹಾಸಿ ನಮಾಜ್ ನೆರವೇರಿಸಲಾಯಿತು. ಹಸ್ತಲಾಘವ, ಆಲಿಂಗನಕ್ಕೆ ಅವಕಾಶ ಇರಲಿಲ್ಲ.

ನಗರದ ಬಾವುಟಗುಡ್ಡೆಯ ಈದ್ಗಾ ಜುಮಾ ಮಸೀದಿಯಲ್ಲಿ ಖತೀಬ್ ಸ್ವದಕತುಲ್ಲಾ ನದ್ವಿ ಮತ್ತು ಮಂಗಳೂರು ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಮ್ ಮುಹಮ್ಮದ್ ಬಾಖವಿ ಹಾಗೂ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅನ್ವರ್ ಅಲಿ ದಾರಿಮಿಯ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ನಡೆಯಿತು.

ನಗರದ ಪಂಪ್‌ವೆಲ್ ಮಸ್ಜಿದು
ತ್ತಖ್ವಾ, ಕಂಕನಾಡಿಯ ರಹ್ಮಾನಿಯಾ ಜುಮಾ ಮಸ್ಜಿದ್, ವಾಸ್‌ಲೇನ್‌ನ ಇಹ್ಸಾನ್ ಮಸ್ಜಿದ್, ಪಾಂಡೇಶ್ವರ ಪೊಲೀಸ್‌ ಲೇನ್‌ನ ಫೌಝಿಯಾ ಜುಮಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದುನ್ನೂರ್, ಅತ್ತಾವರ ಕಾಪ್ರಿಗುಡ್ಡ ಜುಮಾ ಮಸ್ಜಿದ್, ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್, ಬಂದರ್ ಕಚ್ಚಿ ಮೆಮನ್ ಮಸ್ಜಿದ್, ಬಂದರ್ ಕಂದುಕದ ಬದ್ರಿಯಾ ಜುಮಾ ಮಸ್ಜಿದ್, ಬಂದರ್ ಕಸೈಗಲ್ಲಿ ಮಸ್ಜಿದ್, ಬಂದರ್ ಬೂಬುಕಾ ಜುಮಾ ಮಸ್ಜಿದ್, ಕುದ್ರೋಳಿ ಜಾಮಿಯಾ ಮಸ್ಜಿದ್, ಜೋಡುಪಳ್ಳಿ ಮಸ್ಜಿದ್, ನಡುಪಳ್ಳಿ ಮಸ್ಜಿದ್, ಮೊಯ್ದೀನ್ ಮಸ್ಜಿದ್, ಕಂಡತ್‌ಪಳ್ಳಿ ಮಸ್ಜಿದ್ ಸೇರಿದಂತೆ ಹಲವು ಮಸೀದಿಗಳಲ್ಲಿ ಈದ್ ನಮಾಜ್ ನೆರವೇರಿತು.‌

ಮಯ್ಯತ್ ಟೆಂಟ್ ಕೊಡುಗೆ

ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಬಕ್ರೀದ್ ಅನ್ನು ಮುಸ್ಲಿಂ ಸಮುದಾಯವರು ಸರಳವಾಗಿ ಆಚರಿಸಿದರು.

ಹಬ್ಬದ ಪ್ರಯುಕ್ತ ಮುಂಡಾಜೆಯಲ್ಲಿ ಹೆಲ್ಪ್‌ಲೈನ್ ಮುಂಡಾಜೆ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಬದ್ರಿಯಾ ಜುಮ್ಮಾ ಮಸೀದಿ, ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸೀದಿಗೆ ₹ 60 ಸಾವಿರ ಮೌಲ್ಯದ ಮಯ್ಯತ್ ಟೆಂಟ್ ಕೊಡುಗೆಯಾಗಿ ನೀಡಲಾಯಿತು.

ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಅಬ್ಬಾಸ್ ಕೆ.ಎಂ ಮತ್ತು ಕೋಶಾಧಿಕಾರಿ ಹಂಝ ಬಿ.ಎಂ.ಎ ಹಾಗೂ ಸಮಿತಿ ಪದಾಧಿಕಾರಿಗಳಿಗೆ ಟೆಂಟ್ ಹಸ್ತಾಂತರಿಸಿದರು.

ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸೀದಿಯಲ್ಲಿ ಖತೀಬ್ ಇಬ್ರಾಹಿಂ ಸಖಾಫಿ ಕಬಕ, ಸಮಿತಿ ಅಧ್ಯಕ್ಷ ಕರೀಮ್ ಕೆ. ಎಸ್ ಮತ್ತು ಕಾರ್ಯದರ್ಶಿ ಶಬೀರ್ ಅವರಿಗೆ ಟೆಂಟ್ ಹಸ್ತಾಂತರಿಸಿದರು.

ಮಸೀದಿ ಗೌರವಾಧ್ಯಕ್ಷ ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಾರ್ಥನೆಯ ಬಳಿಕ ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವದ ‘ಸಹಾಯ್’ ಸನ್ನದ್ಧ ಸೇವೆಯ ತಂಡಕ್ಕೆ ದೇಣಿಗೆ ಸಂಗ್ರಹಿಸಿ ಸಮರ್ಪಿಸಲಾಯಿತು. ಮರ್ಹೂಮ್ ಕಾಜೂರು ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಕುಟುಂಬಸ್ಥರು, ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾರ್ಥಿ ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಇದ್ದರು. ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯಲ್ಲಿ ಸಾಮೂ
ಹಿಕ ಪ್ರಾರ್ಥನೆ ನಡೆಯಿತು. ಖತೀಬ್ ರಫೀಕ್ ಅಹ್ಸನಿ ನೇತೃತ್ವ ನೀಡಿದರು.

ಕಾಜೂರಿನಲ್ಲಿ ಸಾಮೂಹಿಕ ಪ್ರಾರ್ಥನೆ

ಉಜಿರೆ: ಮುಸ್ಲಿಮರ ಪವಿತ್ರ ಕ್ಷೇತ್ರವಾದ ಕಾಜೂರು ದರ್ಗಾದಲ್ಲಿ ಬುಧವಾರ ತ್ಯಾಗ ಮತ್ತು ಬಲಿದಾನದ ಪವಿತ್ರ ಸಂದೇಶ ಸಾರುವ ಬಕ್ರೀದ್ ಆಚರಣೆ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಬಕ್ರೀದ್ ವಿಶೇಷ ಪ್ರಾರ್ಥನೆ, ಖುತುಬಾ ಪಾರಾಯಣ ಮತ್ತು ಪೆರ್ನಾಳ್ ನಮಾಜ್‌ನ ನೇತೃತ್ವವನ್ನು ಸಯ್ಯಿದ್ ಕಾಜೂರು ತಂಗಳ್ ವಹಿಸಿದ್ದರು. ಕೋವಿಡ್ ನಿರ್ಮೂಲನೆಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

ಕಾಜೂರಿನ ದರ್ಗಾ ಶರೀಫ್‌ನಲ್ಲಿ ಸರ್ವಧರ್ಮೀಯರಿಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಮತ್ತು ಪದಾಧಿಕಾರಿಗಳು ಇದ್ದರು.

‘ಕುಟುಂಬ ಸಂಬಂಧ ಗಟ್ಟಿಯಾಗಲಿ’

ಉಪ್ಪಿನಂಗಡಿ: ‘ಮಾನವ ಸಮು
ದಾಯದ ಸಂಕಷ್ಟಗಳು ದೂರವಾಗಿ ಮುಂದಿನ ದಿನಗಳಲ್ಲಿ ಒಳಿತಾಗಲಿ ಮತ್ತು ಪವಿತ್ರ ಆಚರಣೆ ಮೂಲಕ ನಾವು ಪರಸ್ಪರ ಕುಟುಂಬ ಸಂಬಂಧ
ವನ್ನು ಗಟ್ಟಿಗೊಳಿಸುವ ಜತೆಗೆ ಇತರ ಧರ್ಮೀಯರನ್ನು ಗೌರವಿಸು
ವಂತಾಗಬೇಕು’ ಎಂದು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಶೌಕತ್ ಫೈಝಿ ಹೇಳಿದರು.

ಗಂಡಿಬಾಗಿಲು ಮಸೀದಿಯಲ್ಲಿ ‘ಈದುಲ್ ಅಝ್ಹಾ’ ಬಕ್ರೀದ್ ಅಂಗವಾಗಿ ವಿಶೇಷ ನಮಾಜ್ ಮತ್ತು ಕುತುಬಾ ನೆರವೇರಿಸಿ ಅವರು ಸಂದೇಶ ನೀಡಿದರು. ಸಮುದಾಯ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದೆ, ಹೀಗಿರುವಾಗ ನಾವು ಈ ಸಂದರ್ಭದಲ್ಲಿ ವಿಲಾಸಪ್ರಿಯತೆ, ಆಡಂಬರ, ದುಂದುವೆಚ್ಚ ಕಡಿಮೆ ಮಾಡಿ ಸರಳ ರೀತಿಯಲ್ಲಿ ಆಚರಿಸಿ, ಇತರರ ಕಷ್ಟಗಳಿಗೆ ನೆರವಾಗಬೇಕು ಎಂದರು.

ಮಸೀದಿ ಅಧ್ಯಕ್ಷ ಹಸೈನಾರ್ ಹಾಜಿ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್, ಪದಾಧಿಕಾರಿಗಳಾದ ಎಸ್. ಆದಂ ಹಾಜಿ, ಅಬ್ದುಲ್ ರಜಾಕ್ ಮರ್ವೇಲ್, ಆದಂ ಹಾಜಿ ಬಡ್ಡಮೆ ಇದ್ದರು.

ಕೋವಿಡ್ ನಿಯಮ ಪಾಲನೆ

ಮೂಲ್ಕಿ: ತಾಲ್ಲೂಕಿನ ವಿವಿಧೆಡೆ ಮಸೀದಿಗಳಲ್ಲಿ ಬಕ್ರೀದ್ ಅನ್ನು ಕೋವಿಡ್ ನಿಯಮ ಪಾಲಿಸಿ, ಆಚರಿಸಲಾಯಿತು. ಹಳೆಯಂಗಡಿ ಬೊಳ್ಳೂರಿನ ಮುಹಿಯುದ್ದೀನ್ ಜುಮ್ಮಾ ಮಸೀದಿ, ಕೇಂದ್ರ ಜುಮ್ಮಾ ಮಸೀದಿ ಕದಿಕೆ, ಬದ್ರಿಯ ಜುಮ್ಮಾ ಮಸೀದಿ ಸಾಗ್, ಮೂಲ್ಕಿ ಕೇಂದ್ರ ಶಾಫಿ ಜುಮ್ಮಾ ಮಸೀದಿ, ಕಾರ್ನಾಡು, ಪುನರೂರು, ಬೊಳ್ಳೂರು, ಗುತ್ತಕಾಡು, ಪಕ್ಷಿಕೆರೆ, ಹೊಸಕಾವೇರಿ, ಕೆರೆಕಾಡು ಜುಮ್ಮಾ ಮಸೀದಿಗಳಲ್ಲಿ ಬಕ್ರೀದ್ ಪ್ರಯುಕ್ತ ಮಸೀದಿಯ ಗುರುಗಳ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT