ಮಂಗಳವಾರ, ಅಕ್ಟೋಬರ್ 15, 2019
28 °C
ಡಾ.ಕಾರಂತರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಆಶಯ

ಕಾರಂತ ಜೀವನ ಪಾಠಶಾಲೆಯ ವಿದ್ಯಾರ್ಥಿಗಳಾಗೋಣ: ಜಯಂತ ಕಾಯ್ಕಿಣಿ

Published:
Updated:
Prajavani

ಪುತ್ತೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಜೀವನ ಮೌಲ್ಯದ ಹರಿಕಾರರಾಗಿದ್ದು, ವಿರಾಟ್ ವಿಶ್ವವಿದ್ಯಾಲಯದಂತಹ ಜ್ಞಾನವನ್ನು ಹೊಂದಿದ್ದರು. ನಾವೆಲ್ಲ ಕಾರಂತರ ಜೀವನ ಪಾಠಶಾಲೆಯ ವಿದ್ಯಾರ್ಥಿಗಳಾಗಬೇಕು ಎಂದು ಖ್ಯಾತ ಸಾಹಿತಿ ಹಾಗೂ ಚಿಂತಕ ಜಯಂತ ಕಾಯ್ಕಿಣಿ ಅವರು ಹೇಳಿದರು.

ಇಲ್ಲಿನ ಬಾಲವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಡಾ.ಶಿವರಾಮ ಕಾರಂತರ ಬಾಲವನ ಸಮಿತಿ ಗುರುವಾರ ಹಮ್ಮಿಕೊಂಡ ‘ಡಾ. ಶಿವರಾಮ ಕಾರಂತರ 118ನೇ ಜನ್ಮ ದಿನೋತ್ಸವ ಹಾಗೂ ಬಾಲವನ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾರಂತರು ಆತ್ಮಸಾಕ್ಷಿಯನ್ನು ಎಚ್ಚರಿಸುವ ಕೆಲಸವನ್ನು ತನ್ನ ಲೇಖನಗಳ ಮೂಲಕ ಮಾಡಿರುವ ಬಾಲವನ ಆತ್ಮಸಾಕ್ಷಿಗೆ ಪುನಶ್ಚೇತನ ನೀಡುವ ಜಾಗವಾಗಿದೆ. ಕಾರಂತರು ಸಮಗ್ರ ಸಾಹಿತ್ಯ ಕೃಷಿ ಮಾಡಿದ ಬಾಲವನದಲ್ಲಿ ಕಾಲ ಕಳೆಯುವುದು ನಮ್ಮೆಲ್ಲರ ಪುನಶ್ಚೇತನಕ್ಕೆ ಪೂರಕವಾಗಿದೆ. ಕಾರಂತರು ಬಾಲವನದಲ್ಲಿ ಸಮಾಜಕ್ಕಾಗಿ ನಡೆಸಿದ ಒಳ್ಳೆಯ ಕೆಲಸಗಳು ನಮ್ಮನ್ನು ವಿನೀತಗೊಳಿಸುತ್ತವೆ’ ಎಂದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿದ್ದರು.

ಡಾ.ಶಿವರಾಮ ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್, ಬಾಲವನ ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಆಗಿರುವ ಉಪ ವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಸಮಿತಿ ಸದಸ್ಯ ಕೆ. ಸೀತಾರಾಮ ರೈ ಸವಣೂರು, ನಗರಸಭಾ ಸದಸ್ಯರಾದ ದೀಕ್ಷಾ ಪೈ, ವಿದ್ಯಾ ಆರ್. ಗೌರಿ, ಇಂದಿರಾ ಬಿ., ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ನಗರ ಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್‌ , ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕ್ಸೇವಿಯರ್ ಡಿಸೋಜ, ತಹಶೀಲ್ದಾರ್ ಅನಂತ ಶಂಕರ್, ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಇದ್ದರು.

Post Comments (+)