ಶುಕ್ರವಾರ, ಡಿಸೆಂಬರ್ 2, 2022
20 °C
ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ

ಕೋಮುದ್ವೇಷ ಹರಡುವ ಎಲ್ಲ ಸಂಘಟನೆಗಳ ವಿರುದ್ಧವೂ ಕ್ರಮ: ಯು.ಟಿ.ಖಾದರ್‌ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಸಮಾಜದಲ್ಲಿ ಅಶಾಂತಿ ಹಾಗೂ ಕೋಮುದ್ವೇಷ ಸೃಷ್ಟಿಸುತ್ತಿರುವ ಎಲ್ಲ ಸಂಘಟನೆಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಘಟನೆಗಳ ನಿಷೇಧದ ವಿಚಾರದಲ್ಲೂ ಯಾವುದೇ ತಾರತಮ್ಯಕ್ಕೆ ಅವಕಾಶ ನೀಡಬಾರದು. ಇದರ ಹಿಂದೆ ಸದುದ್ದೇಶವಿರಬೇಕು’ ಎಂದು ವಿಧಾನ ಸಭೆಯಲ್ಲಿ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್‌ ಒತ್ತಾಯಿಸಿದರು. 

ದೇಶದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸೇರಿದಂತೆ ಒಟ್ಟು ಎಂಟು ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಕುರಿತು ಸುದ್ಧಿಗಾರರಿಗೆ ಇಲ್ಲಿ ಬುಧವಾರ ಪ್ರತಿಕ್ರಿಯಿಸಿದ ಅವರು, ‘ದ್ವೇಷ ಹುಟ್ಟಿಸುವುದಕ್ಕೆ, ರಾಜಕೀಯ ಕೊಲೆಗಳಿಗೆ ಇನ್ನು ಮುಂದೆ ಸರ್ಕಾರ ಅವಕಾಶ ನೀಡಬಾರದು’ ಎಂದರು.

‘ಸಮಾಜದ ಶೇ 90ರಷ್ಟು ಜನರು ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿ, ಸೋದರತೆ ಹಾಗೂ ಸೌಹಾರ್ದದಿಂದ ಜೀವನ ನಡೆಸಲು ಬಯಸುತ್ತಾರೆ. ಅಶಾಂತಿ ಇಲ್ಲದ, ಪರಸ್ಪರ ಅವಿಶ್ವಾಸ ಮೂಡಿಸುವ ಚಟುವಟಿಕೆಗೆ ಆಸ್ಪದವಿಲ್ಲದ ಸಮಾಜವನ್ನು ನಿರ್ಮಿಸುವ ಅಗತ್ಯವಿದೆ. ಸಂವಿಧಾನ ವಿರೋಧಿ ಕೃತ್ಯದಲ್ಲಿ ತೊಡಗಿರುವ ಎಲ್ಲ ಸಂಘಟನೆಗಳ ವಿರುದ್ಧ ಸಾಕ್ಷ್ಯಗಳನ್ನು ಆಧರಿಸಿ ದಿಟ್ಟ ಕ್ರಮ ಕೈಗೊಳ್ಳಬೇಕು. ಸರ್ಕಾರ ತೋರಿಸುವ ನಿಜವಾದ ದೇಶಪ್ರೇಮ ಅದು’ ಎಂದರು. 

ಸಂಘಟನೆಗಳ ನಿಷೇಧದ ವಿಚಾರದಲ್ಲಿ ತಾರತಮ್ಯ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖಾದರ್‌, ‘ಸಂಘಟನೆಗಳ ನಿಷೇಧದ ವಿಚಾರವನ್ನು ದೇಶದ ಕಾನೂನು ಮತ್ತು ನ್ಯಾಯಾಲಯ ನೋಡಿಕೊಳ್ಳುತ್ತದೆ. ಈ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ನಾನು ಹೇಳುತ್ತಿಲ್ಲ. ‌ಆದರೆ ಜಿಲ್ಲೆಯಲ್ಲಿ ಧರ್ಮಾಧಾರಿತ ಕೊಲೆಗಳು ನಡೆದಾಗ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ, ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ವರ್ತಿಸಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು