ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಡಿಟ್ ಠೇವಣಿ ಅನುಪಾತ ಕುಸಿತ

ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ
Last Updated 25 ಸೆಪ್ಟೆಂಬರ್ 2019, 15:02 IST
ಅಕ್ಷರ ಗಾತ್ರ

ಮಂಗಳೂರು: ‘ಜಿಲ್ಲೆಯ ಬಹುತೇಕ ಬ್ಯಾಂಕ್‌ಗಳ ಕ್ರೆಡಿಟ್ ಠೇವಣಿ ಅನುಪಾತವು (ಸಿ.ಡಿ.) ಜೂನ್ 30ರ ಅಂತ್ಯಕ್ಕೆ ಶೇ 60ಕ್ಕೂ ಕಡಿಮೆ ಇದ್ದು, ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್.ಸೆಲ್ವಮಣಿ ಸಲಹೆ ನೀಡಿದರು.

ನಗರದಲ್ಲಿರುವ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ‘ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಜಿಲ್ಲಾ ಸಹಲಹಾ ಸಮಿತಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕ್ರೆಡಿಟ್‌ ಠೇವಣಿ ಅನುಪಾತವು ಶೇ 57.82 ಇದ್ದು, ಕಳೆದ ವರ್ಷದ ಇದೇ ಅವಧಿಗಿಂತ ಶೇ 4.65 ಕುಸಿತ ಕಂಡಿದೆ.

‘ಅಲ್ಲದೇ, ಕೆಲವು ಬ್ಯಾಂಕ್‌ಗಳು ಭಾರಿ ಹಣವನ್ನು ಇತರ ಪ್ರದೇಶಗಳಿಗೆ ವರ್ಗಾವಣೆ ಮಾಡುತ್ತಿವೆ ಎಂಬ ಮಾಹಿತಿ ಇದೆ’ ಎಂದರು.

‘ಬ್ಯಾಂಕುಗಳು ಗ್ರಾಮೀಣ ಭಾಗದಲ್ಲಿ ಆಧಾರ್‌ ನೋಂದಣಿ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ (ಪಿಎಂಇಜಿಪಿ), ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಯೋಗ ಸೃಜನೆಗಾಗಿ ಸಾಲ ಮೇಳಗಳನ್ನು ಆಯೋಜಿಸಬೇಕು. ಉದ್ಯಮಶೀಲತೆ ಹಾಗೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

ಬ್ಯಾಂಕ್‌ಗಳ ಸಾಧನೆ:

ಜಿಲ್ಲೆಯಲ್ಲಿ 39 ಬ್ಯಾಂಕ್‌ಗಳ 652 ಶಾಖೆಗಳಿದ್ದು, ಜೂನ್ 30ರ ಅಂತ್ಯಕ್ಕೆ ₹72.67 ಸಾವಿರ ಕೋಟಿ ವ್ಯವಹಾರ ನಡೆಸಿವೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದಲ್ಲಿ ಶೇ 5.25 ಅಭಿವೃದ್ಧಿ ಕಂಡಿದೆ. ₹46.05 ಸಾವಿರ ಕೋಟಿ ಠೇವಣಿ (ವಾರ್ಷಿಕ ಶೇ 8.36 ವೃದ್ಧಿ), ಅಡ್ವಾನ್ಸಸ್ ₹26.62 ಸಾವಿರ ಕೋಟಿ (ವಾರ್ಷಿಕ ಶೇ 0.28 ವೃದ್ಧಿ) ಇದೆ.

ಆದರೆ, ಈ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಟವಾಡೆಯು (ಪಿಎಸ್‌ಎ ಮತ್ತು ಎನ್‌ಪಿಎ) ಶೇ131ರಷ್ಟು ಪ್ರಗತಿ ಸಾಧಿಸಿದೆ. ಇದು ಕೃಷಿಯಲ್ಲಿ ಶೇ 90, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಲ್ಲಿ ಶೇ 137, ಶಿಕ್ಷಣಕ್ಕೆ ಶೇ 32, ಮನೆ ನಿರ್ಮಾಣದಲ್ಲಿ ಶೇ 45 ಇದೆ. ಒಟ್ಟಾರೆಯಾಗಿ ಶೇ 100ರಷ್ಟು ಪ್ರಗತಿ ಇದೆ.

‘ಅಲ್ಪಾವಧಿ ಬೆಳೆ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸುವಂತೆ ರಾಜ್ಯ ಸರ್ಕಾರವು ಆಗಸ್ಟ್‌ 10ರಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ನೆರವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಎಜಿಎಂ ಪಿ.ಕೆ. ಪಟ್ನಾಯಕ್ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಬ್ಯಾಂಕರ್ಸ್‌ ಸಮಿತಿ (ಎಸ್‌ಎಲ್‌ಬಿಸಿ)ಯು ವಿಸ್ತೃತವಾದ ನಿಯಮಾವಳಿಯನ್ನು ರೂಪಿಸಿದ್ದು, ನವೆಂಬರ್‌ ಒಳಗಡೆ ಎಲ್ಲ ಬ್ಯಾಂಕ್‌ಗಳು ಪ್ರಕ್ರಿಯೆ ಪೂರೈಸಿರಬೇಕಾಗಿದೆ’ ಎಂದು ಲೀಡ್ (ಸಿಂಡಿಕೇಟ್‌) ಬ್ಯಾಂಕ್‌ ವ್ಯವಸ್ಥಾಪಕ ಪ್ರವೀಣ್ ಹೇಳಿದರು.

‘ಎಲ್ಲ ಬ್ಯಾಂಕ್‌ಗಳು ತಮ್ಮ ವ್ಯವಹಾರ ಭಾತ್ಮೀದಾರರ ಮಾಹಿತಿಯನ್ನು ಭಾರತೀಯ ಬ್ಯಾಂಕ್ಸ್ ಅಸೋಸಿಯೇಶನ್ (ಐಬಿಎ)ಗೆ ಅಪ್‌ಲೋಡ್ ಮಾಡಬೇಕು. www.iba.org.in/bcregistry ವು ಸಾರ್ವಜನಿಕರಿಗೆ ಮುಕ್ತವಾಗಲಿದೆ’ ಎಂದು ಆರ್‌ಬಿಐ ಎಜಿಎಂ ಪಟ್ನಾಯಕ್ ಹೇಳಿದರು.

ನಬಾರ್ಡ್ ಡಿಜಿಎಂ ಎಸ್.ರಮೇಶ್ ಮತ್ತು ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ರಮಾಕಾಂತ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT