ಶನಿವಾರ, ಅಕ್ಟೋಬರ್ 23, 2021
24 °C

ಮಂಗಳೂರು: ತಣ್ಣೀರುಬಾವಿ ಕಡಲ ತೀರದಲ್ಲಿ ಸ್ವಚ್ಛತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಬಿಳಿ ಟೀ ಶರ್ಟ್, ಟೋಪಿ ಧರಿಸಿದ್ದ ನೂರಾರು ಯುವ ಜನರು ಶುಕ್ರವಾರ ಬೆಳಿಗ್ಗೆ ತಣ್ಣೀರುಬಾವಿ ಕಡಲ ತೀರದಲ್ಲಿ ಸಂಚಲನ ಮೂಡಿಸಿದರು. ಕಡಲ ತಡಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್, ಕುಡಿದು ಎಸೆದ ಬಾಟಲಿ, ತಿಂದು ಬಿಸಾಕಿದ ಕವರ್‌ಗಳನ್ನು ಆಯ್ದು ಚೀಲಕ್ಕೆ ತುಂಬಿದರು.

ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನಾಚರಣೆ ಅಂಗವಾಗಿ ಇಲ್ಲಿನ ಮೀನುಗಾರಿಕಾ ಕಾಲೇಜು ವತಿಯಿಂದ ತಣ್ಣೀರುಬಾವಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ಕಡಲ ಕಿನಾರೆಯ ಸ್ವಚ್ಛತಾ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಚೆನ್ನೈನ ರಾಷ್ಟ್ರೀಯ ಕಡಲ ಸಂಶೋಧನಾ ಕೇಂದ್ರ ಎನ್‌ಸಿಸಿಆರ್‌ ಹಾಗೂ ಕೇಂದ್ರ ಭೂ ವಿಜ್ಞಾನ ಸಚಿವಾಲಯಗಳ ವತಿಯಿಂದ ಈ ವರ್ಷ 35 ಬೀಚ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ.

ಮೀನುಗಾರಿಕಾ ಕಾಲೇಜಿನ ನಿವೃತ್ತ ಡೀನ್ ಡಾ. ಎಸ್.ಎಂ. ಶಿವಪ್ರಕಾಶ್ ಮಾತನಾಡಿ, ‘ಯುವಜನರು ಜಾಗೃತರಾಗಿ ಪರಿಸರ ಸ್ವಚ್ಛತೆಗೆ ತೊಡಗಿರುವುದು ಶ್ಲಾಘನೀಯ’ ಎಂದರು.

ಕಡಲ ತೀರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಜಲಚರಗಳ ಅಸ್ತಿತ್ವಕ್ಕೆ ಕುತ್ತು ಬರುತ್ತಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ಕಡಲು ಮಲಿನವಾಗದಂತೆ ಎಚ್ಚರವಹಿಸಿ, ಜಲಚರಗಳನ್ನು ರಕ್ಷಿಸಬೇಕು ಎಂದು ವಿದ್ಯಾರ್ಥಿ ವೀರೇಶ್ ವಿನಂತಿಸಿದರು. ಸಂಗ್ರಹಿಸಿದ ಕಸವನ್ನು ಮಹಾನಗರ ಪಾಲಿಕೆ ವಿಲೇವಾರಿ ಮಾಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು