ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ವರ್ಷಗಳ ಬಾಕಿ ತುಟ್ಟಿ ಭತ್ಯೆ ನೀಡಲು ಆಗ್ರಹ

ಲಾಲ್‌ಬಾಗ್‌: ಬೀಡಿ ಕಂಪನಿ ಕಚೇರಿ ಎದುರುವ ಕಾರ್ಮಿಕರ ಪ್ರತಿಭಟನೆ
Published 3 ಆಗಸ್ಟ್ 2023, 15:43 IST
Last Updated 3 ಆಗಸ್ಟ್ 2023, 15:43 IST
ಅಕ್ಷರ ಗಾತ್ರ

ಮಂಗಳೂರು: ಬೀಡಿ ಕಾರ್ಮಿಕರಿಗೆ 2015ರಿಂದ 2018ರ ಅವಧಿಯಲ್ಲಿ ಬಾಕಿ ಇರಿಸಿಕೊಂಡ ತುಟ್ಟಿ ಭತ್ಯೆಯನ್ನು ನೀಡುವಂತೆ ಒತ್ತಾಯಿಸಿ ಸಿಐಟಿಯು ಅಂಗ ಸಂಸ್ಥೆಗಳಾದ ಮಂಗಳೂರು ಬೀಡಿ ಕೆಲಸಗಾರರ ಸಂಘ ಹಾಗೂ ಅಳಪೆ ಪ್ರದೇಶ ಬೀಡಿ ಲೇಬರ್‌ ಯೂನಿಯನ್‌ ಆಶ್ರಯದಲ್ಲಿ ಲಾಲ್‌ಬಾಗ್‌ನ ಸೌತ್ ಕೆನರಾ ಹೋಂ ಇಂಡಸ್ಟ್ರೀಸ್‌ ಡಿಪೊ ಬಳಿ ಗುರುವಾರ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಬೀಡಿ ಕಾರ್ಮಿಕ ಮಹಿಳೆಯರು ಮೆರವಣಿಗೆಯಲ್ಲಿ ತೆರಳಿ ಈ ಕುರಿತು ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ವಸಂತ ಆಚಾರಿ, ‘ನಾವು ಕೇಳುತ್ತಿರುವುದು ಹೆಚ್ಚುವರಿ ಹಣವನ್ನು ಅಲ್ಲ. 2015ರಿಂದ 2018ರವರೆಗೆ ಪ್ರತಿ ಸಾವಿರ ಬೀಡಿಗೆ ₹12.75 ರಂತೆ ತುಟ್ಟಿ ಭತ್ಯೆ ನೀಡಬೇಕಿತ್ತು. ಬೀಡಿ ಕಟ್ಟುವ ಪ್ರತಿ ಮಹಿಳೆಯರಿಗೂ ಕನಿಷ್ಠ ₹ 11ಸಾವಿರ ತುಟ್ಟಿ ಭತ್ಯೆಯನ್ನು ಬೀಡಿ ಕಂಪನಿಗಳ ಮಾಲೀಕರು ನೀಡಲು ಬಾಕಿ ಇದೆ’ ಎಂದರು.

‘ನ್ಯಾಯಾಲಯದಲ್ಲಿ ಬೀಡಿ ಕಂಪನಿ ಮಾಲೀಕರ ವಿರುದ್ಧ ಆದೇಶವಾಗಿದೆ. ಆದರೂ ಆ ಹಣವನ್ನು ನೀಡುತ್ತಿಲ್ಲ. ಮಾರುಕಟ್ಟೆಯಲ್ಲಿ ಪ್ರತಿಯೊಂದು ಸಾಮಗ್ರಿಯ ದರ ಹೆಚ್ಚಳವಾಗಿದ್ದು, ಜೀವನ ನಿರ್ವಹಣೆ ದುಬಾರಿ ಆಗಿದೆ. ಬಿಜೆಪಿ ಸರ್ಕಾರ ಬೇಡ ಎಂದು ಬೀಡಿ ಕಾರ್ಮಿಕರು ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಬೀಡಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್ ಬಜಾಲ್‌, ‘ಬೀಡಿ ಕಾರ್ಮಿಕರಿಗೆ ತುಟ್ಟಿ ಭತ್ಯೆ ತಡೆ ಹಿಡಿದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಇತ್ತು. ಆಗ ಸರ್ಕಾರ ಬೀಡಿ ಕಾರ್ಮಿಕರ ಪರ ವಹಿಸದೇ ಕಂಪನಿ ಮಾಲೀಕರ ಪರ ವಹಿಸಿತ್ತು. ತಡೆ ಹಿಡಿದ ತುಟ್ಟಿ ಭತ್ಯೆಯನ್ನು ಬೀಡಿ ಕಾರ್ಮಿಕರಿಗೆ ಕೊಡಿಸುವ ಗ್ಯಾರಂಟಿಯನ್ನು ಸರ್ಕಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ಸಾವಿರ ಬೀಡಿಗೆ ₹ 210  ಕನಿಷ್ಠ ಕೂಲಿಯನ್ನು 2018ರ ಏ. 1ರಿಂದ ನಿಗದಿಪಡಿಸಲಾಗಿದೆ. ಅದನ್ನು ಜಾರಿಗೊಳಿಸುವ ಬದಲು ಮಾಲೀಕರು ಈ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಕನಿಷ್ಠ ಕೂಲಿಯನ್ನೂ ಜಾರಿಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ಮಂಗಳೂರು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಭಾರತಿ ಬೋಳಾರ, ಪ್ರತಿಭಟನೆಯಲ್ಲಿ ಅಳಪೆ ಪ್ರದೇಶ ಬೀಡಿ ಲೇಬರ್‌ ಯೂನಿಯನ್‌ ಅಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮೀ ಹಾಗೂ ಇತರರು ಭಾಗವಹಿಸಿದರು.‌

ಹಗಲು–ರಾತ್ರಿ ಪುರುಸೊತ್ತಿಲ್ಲದೇ ದುಡಿಯುವ ಬೀಡಿ ಬ್ರಾಂಚ್‌ ತಲುಪುವವರೆಗೂ ಕಟ್ಟನ್ನು ತಿರುಪುವ ಬೀಡಿ ಕಾರ್ಮಿಕರ ಕಷ್ಟವನ್ನು ಸರ್ಕಾರ ಹಾಗೂ ಕಂಪನಿ ಮಾಲೀಕರು ಅರ್ಥ ಮಾಡಿಕೊಳ್ಳಬೇಕು

-ಭಾರತಿ ಬೋಳಾರ ಮಂಗಳೂರು ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ

ನಮ್ಮದು ನ್ಯಾಯಯುತ ಬೇಡಿಕೆ. ಇಂದಿನದು ಸಾಂಕೇತಿಕ ಪ್ರತಿಭಟನೆ. ನ್ಯಾಯಾಲಯದ ಆದೇಶದ ಪ್ರಕಾರ ಬಾಕಿ ತುಟ್ಟಿ ಭತ್ಯೆ ನೀಡದಿದ್ದರೆ ಪ್ರತಿಭಟನೆಯ ಸ್ವರೂಪವನ್ನು ತೀವ್ರಗೊಳಿಸಬೇಕಾದೀತು

- ಜೆ.ಬಾಲಕೃಷ್ಣ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT