ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ ಶಿಬಿರ

Last Updated 21 ಅಕ್ಟೋಬರ್ 2021, 8:33 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಯುದ್ಧಕ್ಕೆ ತಯಾರಿ ಮಾಡಿಕೊಳ್ಳುವಂತೆ ಸ್ಪರ್ಧಾತ್ಮಕ ಪರೀಕ್ಷೆ ತೇರ್ಗಡೆ ಹೊಂದಲು ದೊಡ್ಡ ತಯಾರಿಯ ಅಗತ್ಯವಿದೆ. ಅನವಶ್ಯಕವಾಗಿರುವುದನ್ನು ಓದುವ ಬದಲು ಅಗತ್ಯವಿರುವುದನ್ನು ಮಾತ್ರ ನಿಖರವಾಗಿ ಓದಬೇಕು. ತರಬೇತಿಯೊಂದಿಗೆ ಗುರಿ ಸಾಧಿಸುವ ಛಲವನ್ನು ಬೆಳೆಸಿಕೊಳ್ಳಬೇಕು’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.

ಇಲ್ಲಿನ ಗುರುನಾರಾಯಣ ಸಭಾ ಭವನದಲ್ಲಿ ಬೆಸ್ಟ್ ಫೌಂಡೇಷನ್ ಆಶ್ರಯದಲ್ಲಿ ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳ ಸಹಕಾರದಲ್ಲಿ ಯುಪಿಎಸ್‌ಸಿ, ಬ್ಯಾಂಕಿಂಗ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವತಯಾರಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಐಎಎಸ್, ಐಪಿಎಸ್ ತರಬೇತಿ ಎಂಬುದು ಶೋಕಿ ಅಲ್ಲ. ಯಾಕೆಂದರೆ ಅದೊಂದು ಕೋರ್ಸ್ ಅಲ್ಲ. ಈ ಪರೀಕ್ಷೆ ಎದುರಿಸಲು ಉನ್ನತ ಅಂಕಗಳೇ ಬೇಕೆಂದಿಲ್ಲ. ಶೇ 60ರಷ್ಟು ಅಂಕ ಪಡೆಯುವ ಸಾಮರ್ಥ್ಯ ಇದ್ದರೆ, 6-8 ಗಂಟೆ ಓದುವ ಗುರಿ ಇದ್ದರೆ, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಪರೀಕ್ಷೆಯನ್ನು ಗೆಲ್ಲಬಹುದು’ ಎಂದರು.

ಕರಾವಳಿ ಜಿಲ್ಲೆಯಲ್ಲಿ ಹೆಚ್ಚಿನವರು ವಿದೇಶದ ಉದ್ಯೋಗದ ಕಡೆಗೆ ಒಲವು ತೋರುತ್ತಾರೆ.‌ ಆದರೆ, ಕೋವಿಡ್ ಕಾಲಘಟ್ಟದಲ್ಲಿ ಸರ್ಕಾರಿ ಉದ್ಯೋಗದ ಕಡೆಗೆ ಒಲವು ಜಾಸ್ತಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಿಲ್ಲೆಯ ಜನರ ಭಾಗವಹಿಸುವಿಕೆ ಕಡಿಮೆ ಇರುವುದನ್ನು ಗಮನಿಸಿ, ತರಬೇತಿ ಆಯೋಜಿಸಿದ್ದೆವು. ಉತ್ತಮ ಸ್ಪಂದನೆ ದೊರೆತಿದೆ’ ಎಂದು ಹೇಳಿದರು.

ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿದ್ದರು. ‘ಯುವಜನರು ದೇಶದ ಆಸ್ತಿ. ತಾಲ್ಲೂಕಿನ‌ ಇತಿಹಾಸ ನೋಡಿದಾಗ ತಾಲ್ಲೂಕಿನಿಂದ ಯಾರೊಬ್ಬರೂ ಐಎಎಸ್, ಐಪಿಎಸ್ ಅಧಿಕಾರಿಗಳು ಆಗಿಲ್ಲ. ಹೀಗಾಗಿ, ಬೆಸ್ಟ್ ಫೌಂಡೇಷನ್ ತರಬೇತಿ ಆಯೋಜಿಸಿ, ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಮುಂದಾಗಿದೆ’ ಎಂದರು. ಗ್ರಾಮಾಂತರ ಭಾಗದ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಯಲ್ಲಿ ಓದಿದವರು ಎಂಬ ಕೀಳರಿಮೆ ಬೇಡ. ಸಾಧನೆ ಮಾಡಿದ ಬಹುತೇಕರು ಗ್ರಾಮೀಣ ಮೂಲದಿಂದ ಬಂದವರು ಎಂಬುದು ಉಲ್ಲೇಖಾರ್ಹ ಎಂದು ಹೇಳಿದರು.

ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಬಿ.ಎ ಕುಮಾರ್ ಹೆಗ್ಡೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳ ಮಂಗಳೂರು ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್ ನಾಯಕ್ ತರಬೇತಿ ಕಾರ್ಯಾಗಾರದ ಮಾಹಿತಿ ನೀಡಿದರು.

ಬೆಸ್ಟ್ ಫೌಂಡೇಷನ್ ಸಲಹೆಗಾರ ನಾಮದೇವ ರಾವ್ ಮುಂಡಾಜೆ ಸ್ವಾಗತಿಸಿದರು. ಸೌಜನ್ಯಾ ‘ಕಟ್ಟುತ್ತೇವಾ’ ಧ್ಯೇಯಗೀತೆ ಹಾಡಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಗುರುರಾಜ್ ಗುರಿಪಳ್ಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT