ಮಂಗಳವಾರ, ಜನವರಿ 31, 2023
19 °C

ಬೆಳ್ತಂಗಡಿ: ದಲಿತಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ‘ಹಿಂದುತ್ವವಾದಿಗಳ ಅಟ್ಟಹಾಸದಿಂದ ಹಿಂದೂ ಧರ್ಮಕ್ಕೆ ಅಪಾಯ ಬರುತ್ತಿದೆ. ಆ ಮೂಲಕ ದುಡಿಯುವ ಜನರ ಶೋಷಣೆ ನಡೆಸಲಾಗುತ್ತಿದೆ’ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಹೇಳಿದರು.

ಹಿಂದುಳಿದ ವರ್ಗ, ದಲಿತರ ಮೇಲೆ ನಡೆಸುತ್ತಿರುವ ದಾಳಿಗಳನ್ನು ಖಂಡಿಸಿ ದಲಿತ ಹಕ್ಕು ಹೋರಾಟ ಸಮಿತಿ ವತಿಯಿಂದ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮಕ್ಕೆ ಅಪಾಯವಾಗುವಂತಹ ನಡತೆಗಳ ಬಗ್ಗೆ ತಿದ್ದಿಕೊಳ್ಳಲು ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಅವರು ಸಲಹೆ ನೀಡಿದ್ದಕ್ಕೆ ಅವರ ಮೇಲೆ ದಾಳಿ ನಡೆಸಲು ಮುಂದಾದ ಹಿಂದುತ್ವವಾದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

‘ಸಂಜೀವ ಪೂಜಾರಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಿ ಅವರ ಮೇಲೆ ನಡೆಯುವ ದಾಳಿಯನ್ನು ತಡೆಯಲು ಸರ್ಕಾರ ಮುಂದಾಗಬೇಕು’ ಎಂದರು.

ದಲಿತಹಕ್ಕು ಹೊರಾಟ ಸಮಿತಿ ಬೆಳ್ತಂಗಡಿ ತಾಲ್ಲೂಕು ಕಾರ್ಯದರ್ಶಿ ಈಶ್ವರಿ ಮಾತನಾಡಿ, ‘ಹಿಂದುತ್ವವಾದಿಗಳ ದಾಳಿಗಳು ನಿರಂತರವಾಗಿ ಹಿಂದುಳಿದ ವರ್ಗಗಳ ಹಾಗೂ ದಲಿತ ಸಮುದಾಯದವರ ಮೇಲೆಯೇ ಆಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಭಾರತದ ಸಂವಿಧಾನವನ್ನೇ ನಾಶ ಮಾಡಲು ಹಿಂದುತ್ವವಾದಿಗಳು ಮುಂದಾಗುತ್ತಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಜಾತ್ಯತೀತ ಹಿಂದು ಧರ್ಮಕ್ಕೆ ಅಪಾಯವಿದೆ’ ಎಂದರು.

ರೈತ ಸಂಘದ ಶ್ಯಾಮರಾಜ ಪಟ್ರಮೆ ಮಾತಾಡಿದರು. ದಲಿತ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ಬಾಬು ಕೊಯ್ಯೂರು, ಮುಖಂಡರಾದ ಚೋಮ, ಧನಂಜಯ ಗೌಡ, ಕಿರಣಪ್ರಭಾ, ಜಯರಾಮ ಮಯ್ಯ, ನೆಬಿಸಾ, ಸಂಜೀವ ನಾಯ್ಕ, ಭವ್ಯಾ, ಅಶ್ವಿತಾ, ಸುಜಾತಾ, ವೇದಾವತಿ ಇದ್ದರು. ಚಂದ್ರಶೇಖರ ಭಟ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.