ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲಿನಲ್ಲಿ ಮೂಲನಿವಾಸಿಗಳ ಬದುಕು: ದೂರು

ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಂದಾಳುಗಳ ಸಭೆ
Last Updated 27 ಆಗಸ್ಟ್ 2022, 2:36 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಮೂಲ ನಿವಾಸಿಗಳು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಿನಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಅವರಿಗೆ ನೀಡಿರುವ ಸೋಲಾರ್‌ ದೀಪಗಳೂ ಸರಿಯಾಗಿ ಉರಿಯುತ್ತಿಲ್ಲ. ಅವರಿಗೆ ಸೀಮೆಎಣ್ಣೆಯಾದರೂ ನೀಡಲು ಕ್ರಮ ಕೈಗೊಳ್ಳಬೇಕು’ ಎಂಬ ಒತ್ತಾಯ ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಂದಾಳುಗಳ ಸಭೆಯಲ್ಲಿ ವ್ಯಕ್ತವಾಯಿತು.

ತಹಶೀಲ್ದಾರ್ ಪೃಥ್ವಿ ಸಾನಿಕಮ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಮೂಲ ನಿವಾಸಿಗಳ ಮನೆಗಳಿಗೆ ಹಾಕಲಾದ ಸೋಲಾರ್ ದೀಪಗಳನ್ನು ದುರಸ್ತಿ ಮಾಡಿದರೂ ಕೆಲವೇ ದಿನಗಳಲ್ಲಿ ಹಾಳಾಗಿ ಹೋಗುತ್ತಿದೆ ಎಂದು ಮುಖಂಡ ಶೇಖರ ಲಾಯಿಲ ದೂರಿದರು. ಅದಕ್ಕೆ ಜಯಾನಂದ ಹಾಗೂ ಇತರರೂ ಧ್ವನಿ ಗೂಡಿಸಿದರು.

ಮೆಸ್ಕಾಂ ಅಧಿಕಾರಿಗಳು ಉತ್ತರಿಸಿ, ಈ ಹಿಂದೆ ದೂರು ಬಂದಾಗ ಎಲ್ಲ ಗ್ರಾಮಗಳಿಗೂ ತೆರಳಿ ದುರಸ್ತಿ ಮಾಡಿದ್ದೇವೆ. ಹಾಳಾಗಿದ್ದರೆ ಮುಂದಿನ ತಿಂಗಳು ಮತ್ತೊಮ್ಮೆ ಸೋಲಾರ್ ದೀಪಗಳನ್ನು ದುರಸ್ತಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಡಿ.ಸಿ ಮನ್ನಾ ಜಮೀನಿನ ಕುರಿತು ಪ್ರತಿ ಸಭೆಯಲ್ಲಿ ಚರ್ಚಿಸಿದರೂ ಯಾವುದೇ ಪ್ರಗತಿಯಾಗದ ಕುರಿತು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಸಭೆಗಳಲ್ಲಿಯೂ ಯಾವುದಾದರೂ ಒಂದು ಕಾರಣ ಹೇಳಿ ವಿಚಾರ ಮುಂದೂಡಲಾಗುತ್ತಿದೆ ನಮಗೆ ಸ್ಪಷ್ಟವಾದ ಮಾಹಿತಿ ನೀಡಿ ಎಂದು ನೇಮಿರಾಜ್ ಒತ್ತಾಯಿಸಿದರು. ಇದಕ್ಕೆ ಬಿ.ಕೆ ವಸಂತ, ಸಂಜೀವ.ಆರ್, ಬೇಬಿ ಸುವರ್ಣ, ಬಾಬು, ಶೇಷಪ್ಪ ಸೇರಿದಂತೆ ಎಲ್ಲರೂ ಧ್ವನಿ ಗೂಡಿಸಿದರು.

ಡಿ.ಸಿ ಮನ್ನಾ ಜಮೀನಿನ ಕುರಿತು ಮರು ಸರ್ವೆ ಕಾರ್ಯ ಮಾಡುವ ಭರವಸೆಯನ್ನು ತಹಶೀಲ್ದಾರ್‌ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿರುವ ಜಮೀನಿನಲ್ಲಿ ಮನೆ ಕಟ್ಟಲು ಜಮೀನನ್ನು ಭೂ ಪರಿವರ್ತನೆ ಮಾಡಲು ಸರ್ಕಾರದ ಅನುಮತಿ ಪಡೆಯಬೇಕು ಎಂಬ ಕಾನೂನಿನಿಂದಾಗಿ ಕನಿಷ್ಠ ಮನೆಯನ್ನು ಕಟ್ಟಲೂ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣ ವಾಗಿದೆ. ಭೂ ಪರಿವರ್ತನೆಗೆ ತಹಶೀಲ್ದಾರರಿಗೆ ಅಥವಾ ಜಿಲ್ಲಾಧಿಕಾರಿ ಯವರಿಗೆ ಅಧಿಕಾರ ನೀಡಬೇಕು ಎಂದು ಬೇಬಿ ಸುವರ್ಣ, ಶೇಷಪ್ಪ, ಸಂಜೀವ ಒತ್ತಾಯಿಸಿದರು. ಇದು ಪರಿಶಿಷ್ಟ ಜಾತಿ, ಪಂಗಡದವರ ಜಮೀನನ್ನು ಇತರರು ಕಬಳಿಸದಂತೆ ಮಾಡಿದ ಕಾನೂನಾಗಿದ್ದು ಇದರಿಂದ ಸಮಾಜದ ಜನರಿಗೆ ತೊಂದರೆಯಾಗಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಹಶೀಲ್ದಾರರು ತಿಳಿಸಿದರು.

ತಾಲ್ಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈಗಿನ ಕ್ರೀಡಾಂಗಣದ ಜಾಗವನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅದು ಪೂರ್ಣಗೊಂಡ ಕೂಡಲೇ ನೂತನ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಕುಕ್ಕೇಡಿಯಲ್ಲಿ ಅಂಬೇಡ್ಕರ್ ಭವನದ ಸಮೀಪ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಶೇಖರ ಕುಕ್ಕೇಡಿ ತಿಳಿಸಿದರು. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮೆಸ್ಕಾ ಎಂಜಿನಿಯರ್ ಶಿವಶಂಕರ್ ಅವರು ಪರಿಶಿಷ್ಟ ಜಾತಿ ಪಂಗಡದವರಿಗೆ 75 ಯೂನಿಟ್ ವರೆಗೆ ವಿದ್ಯುತ್ ಉಪಯೋಗಕ್ಕೆ ಸಹಾಯಧನ ನೀಡುವ ವಿಚಾರದ ಕುರಿತು ಮಾಹಿತಿ ನೀಡಿ, ಇಲಾಖೆಗೆ ಬಂದು ಮಾಹಿತಿ ಪಡೆದು ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಮುಖಂಡ ಡೀಕಯ್ಯರ ಸಾವಿನ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಮಾಹಿತಿ ನೀಡಿದ ಬೆಳ್ತಂಗಡಿ ಪಿಎಸ್‌ಐ ನಂದಕುಮಾರ್ ಈ ಬಗ್ಗೆ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖಾಧಿಕಾರಿ ಹೇಮಚಂದ್ರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT