ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈರಲ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Last Updated 27 ಡಿಸೆಂಬರ್ 2022, 5:32 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಸಹಸ್ರಾರು ವರ್ಷಗಳ ಕಾಲ ಪರಕೀಯ ದಾಳಿ ದೇಶದ ಮೇಲೆ ಆಗಿದ್ದರೂ ದೈವ, ದೇವರ ಮೇಲಿನ ನಮ್ಮ ನಂಬಿಕೆಗಳೇ ನಮ್ಮ ಹಿರಿಮೆ- ಗರಿಮೆಗಳು ಇನ್ನೂ ಉಳಿದುಕೊಳ್ಳಲು ಕಾರಣ’ ಎಂದು ಚಿತ್ರದುರ್ಗ ಮಠದ ಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಓಡಿಲ್ನಾಳ ಗ್ರಾಮದ ಮೈರಲ್ಕೆ ಶ್ರೀರಾಮನಗರದಲ್ಲಿರುವ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮೊದಲ ದಿನವಾದ ಭಾನುವಾರ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ದೈವಿ ಭಾವನೆಗಳು ದೇಶವನ್ನು ಜೋಡಿಸಿವೆಯಲ್ಲದೆ ಒಗ್ಗಟ್ಟು ಮೂಡಿಸುವ ಶಕ್ತಿ ಅದಕ್ಕಿದೆ. ಉತ್ತರ ಭಾರತೀಯರು ದಕ್ಷಿಣದ ದೇವಾಲಯಗಳನ್ನು ಸಂದರ್ಶಿಸುವುದು, ದಕ್ಷಿಣ ಭಾರತೀಯರು ಉತ್ತರಕ್ಕೆ ಹೋಗುವುದು ಸಾಮಾನ್ಯವಾಗಿದೆ. ಭಾರತ ಹಾಗೂ ದೈವತ್ವ ಇದು ಒಂದಕ್ಕೊಂದು ಪೂರಕ ಹಾಗೂ ಬಿಟ್ಟಿರಲಾರದ ಅಂಶವಾಗಿದೆ. ಹೀಗಾಗಿ, ಪ್ರಾಕೃತಿಕ ದಾಳಿ ಮತ್ತು ಪರಕೀಯ ದಾಳಿಗಳಿಂದ ದೇವಾಲಯಗಳು ನಾಶ ಹೊಂದಿದ್ದರೂ ಅವನ್ನು ಮತ್ತೆ ಪುನರುಜ್ಜೀವನಗೊಳಿಸಲಾಗಿದೆ’ ಎಂದರು.

‘ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ದೇವರ ಮೇಲಿನ ಭಯ ಭಕ್ತಿಗಳನ್ನು ಯಾರಿಂದಲೂ ಕುಗ್ಗಿಸಲು ಸಾಧ್ಯವಿಲ್ಲ. ದೇವರು ಇದ್ದಾನೆ ಅಥವಾ ಇಲ್ಲಾ ಎಂಬ ಎಡ ಬಲದ ವಿಚಾರಗಳು ಅವರವರ ಅನುಭವಕ್ಕೆ ಬಿಟ್ಟದ್ದು. ಈ ಚರ್ಚೆ ಮನುಕುಲ ಇರುವ ತನಕ ಇರಲಿದೆ. ಶಾಂತಿಯಿಂದ ಬದುಕಿ ಬಾಳಲು ನಮ್ಮ ನಂಬಿಕೆಗಳೇ ಕಾರಣವಾಗಿವೆ’ ಎಂದು ತಿಳಿಸಿದರು

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಿ, ‘ಶಿವನ ಮೂರ್ತಿಯ ಶೋಭಾಯಾತ್ರೆಯ ಹಾಗೂ ಹೊರಕಾಣಿಕೆಯ ಸಮರ್ಪಣೆಯ ವೈಭವವನ್ನು ನೋಡಿದಾಗ ಕಿರಾತಮೂರ್ತಿ ದೇವಸ್ಥಾನದ ಮಹಿಮೆ ಅರಿವಾಗುತ್ತದೆ’ ಎಂದರು.

ಬಳ್ಳಮಂಜ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಂ. ಶ್ರೀಹರ್ಷ ಸಂಪಿಗೆತ್ತಾಯ ಧಾರ್ಮಿಕ ಸಭಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಿ.ಯದುಪತಿ ಗೌಡ ಧಾರ್ಮಿಕ ಉಪನ್ಯಾಸ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಗುರುವಾಯನಕರೆ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಭಗೀರಥ ಜಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಜ್‌ಪ್ರಕಾಶ್‌ ಶೆಟ್ಟಿ ಪಡ್ಡೈಲು, ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್‌ ಅಧ್ಯಕ್ಷ ಪಿ. ವೃಷಭ ಆರಿಗ ಇದ್ದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಜೈನ್‌ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಗೋಪಾಲ ಶೆಟ್ಟಿ ವಂದಿಸಿದರು. ಪ್ರಜ್ಞಾ ಬಿ. ಓಡಿಲ್ನಾಳ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಮನೋಹರ್ ಪಿ.ಸಿ. ವಂದಿಸಿದರು. ಬಳಿಕ ಜ್ಞಾನ ಐತಾಳ್‌ ನೇತೃತ್ವದ ಹೆಜ್ಜೆನಾದ ಮಂಗಳೂರು ತಂಡದಿಂದ ನೃತ್ಯ ಸಂಗೀತ ವೈಭವ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT