ಬುಧವಾರ, ಮಾರ್ಚ್ 22, 2023
31 °C
ಯುಕೆಜಿ, ಶಾಲೆ–ಕಾಲೇಜು ವಿದ್ಯಾರ್ಥಿಗಳು, 50 ವರ್ಷ ಮೇಲಿನವರಿಗೆ ವೈವಿಧ್ಯಮಯ ಸ್ಪರ್ಧೆಗಳು

ಭಂಡಾರಿ ಕ್ರೀಡಾ ಸಂಗಮದಲ್ಲಿ ಖುಷಿಯ ಅಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ತಲೆಯಲ್ಲಿ ಸ್ಲೇಟ್ ಇಟ್ಟುಕೊಂಡು ಸಮತೋಲನ ಕಾಯ್ದುಕೊಂಡು ಮುಂದೆ ಸಾಗಿದ ಪುಟಾಣಿಗಳ ಚಾಕಚಕ್ಯ ನಡೆ–ನಡಿಗೆ ನೋಡುಗರನ್ನು ಮುದಗೊಳಿಸಿತು. ಮಕ್ಕಳ ಮತ್ತು ಯುವಕರ ಓಟ ಮತ್ತು ಎಸೆತ ರೋಮಾಂಚನ ಮೂಡಿಸಿದರೆ ಸಂಗೀತ ಕುರ್ಚಿ, ಲಿಂಬೆ–ಚಮಚ ಆಟದಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರು ಸಂಭ್ರಮಿಸಿದರು.

ವಿಶ್ವ ಭಂಡಾರಿ ಸಮಾಜ ಸಂಘಟನೆಗಳ ಒಕ್ಕೂಟ ಮತ್ತು ಮಂಗಳೂರಿನ ಭಂಡಾರಿ ಯುವ ವೇದಿಕೆ ಮಂಗಳೂರು ಹೊರವಲಯದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜಾಗತಿಕ ಭಂಡಾರಿ ಕ್ರೀಡಾ ಸಂಗಮದಲ್ಲಿ ಮೋಜಿನ ಆಟಗಳು ಮತ್ತು ಶಕ್ತಿ–ಯುಕ್ತಿ ಪ್ರದರ್ಶನಗೊಂಡ ಸ್ಪರ್ಧೆಗಳು ಸಮಾಜದವರಿಗೆ ದಿನವಿಡೀ ಮುದ ನೀಡಿದವು.

ಯುಕೆಜಿಯಿಂದ ಹಿಡಿದು ಶಾಲೆ–ಕಾಲೇಜು ವಿದ್ಯಾರ್ಥಿಗಳ ವರೆಗೆ, ಮುಕ್ತ ವಿಭಾಗದಲ್ಲಿ 50 ವರ್ಷಕ್ಕೂ ಮೇಲಿನವರ ವರೆಗೆ ವಿವಿಧ ವಿಭಾಗಗಳಲ್ಲಿ ನಡೆದ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಗೆದ್ದವರು ಬಹುಮಾನ ಪಡೆದು ಬೀಗಿದರೆ ಸೋತವರು ಪಾಲ್ಗೊಂಡು ಸ್ಪರ್ಧೆ ನೀಡಿದ ಖುಷಿಯ ಅಲೆಯಲ್ಲಿ ಮಿಂದರು.

ಸಣ್ಣ ಮಕ್ಕಳಿಗೆ ಸ್ಲೇಟ್ ಬ್ಯಾಲೆನ್ಸಿಂಗ್ ಮತ್ತು ಚಾಕೊಲೊಟ್ ಹೆಕ್ಕುವ ಸ್ಪರ್ಧೆಗಳು ಇದ್ದವು. ಯುವಜನತೆಗೆ 100, 200 ಮೀಟರ್ಸ್ ಓಟ, ಶಾಟ್ ಪಟ್‌ ಮುಂತಾದ ಕ್ರೀಡಾ ಸ್ಪರ್ಧೆಗಳು ಇದ್ದವು. ಹಿರಿಯ ನಾಗರಿಕರು ಮಡಕೆ ಒಡೆಯುವ ಪ್ರಯತ್ನ ನಡೆಸಿ ರಂಜಿಸಿದರು. 4x100 ಮೀಟರ್ಸ್ ರಿಲೆ, ಅಥ್ಲೆಟಿಕ್‌ ಕೂಟದ ಪ್ರತೀತಿ ಉಂಟುಮಾಡಿತು. ಕ್ರಿಕೆಟ್‌, ವಾಲಿಬಾಲ್‌, ಥ್ರೋಬಾಲ್‌ ಜೊತೆಯಲ್ಲಿ ಮ್ಯಾಟ್‌ ಮೇಲೆ ಕಬಡ್ಡಿಯೂ ಗಮನ ಸೆಳೆಯಿತು. ಹಗ್ಗ–ಜಗ್ಗಾಟವು ಖುಷಿಯ ಅಲೆಯನ್ನು ಎಬ್ಬಿಸಿತು. 

ಸತೀಶ್ ಭಂಡಾರಿ ಅವರಿಂದ ಧ್ವಜಾರೋಹಣ
ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್ ಭಂಡಾರಿ ಕಾಡಬೆಟ್ಟು ಧ್ವಜಾರೋಹಣ ನೆರವೇರಿಸಿದರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ ದೀಪ ಬೆಳಗಿಸಿದರು. ದೇವಸ್ಥಾನದ ನಿಕಟಪೂರ್ವ ಕಾರ್ಯದರ್ಶಿ ಸೋಮಶೇಖರ ಭಂಡಾರಿ, ಕುಚ್ಚೂರು ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ ಕುಳಾಯಿ, ಭಂಡಾರಿ ಯುವ ವೇದಿಕೆಯ ಅಧ್ಯಕ್ಷ ನಿತ್ಯಾನಂದ ಭಂಡಾರಿ, ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷ ಸಂಜೀವ ಭಂಡಾರಿ ಮೂಡುಶೆಡ್ಡಿ, ಉದ್ಯಮಿ ಸಂತೋಷ್ ಭಂಡಾರಿ, ವಿಶ್ವನಾಥ ಭಂಡಾರಿ ಕಾಡಬೆಟ್ಟು, ಕರಾಟೆ ಪಟು ಭಕ್ತಿ ಭಂಡಾರಿ, ಭಂಡಾರಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೃಷ್ಣಾನಂದ ಭಂಡಾರಿ ಕುತ್ತೆತ್ತೂರು, ಕೋಶಾಧಿಕಾರಿ ನಿಶಾನ್ ಭಂಡಾರಿ, ಬೆಳ್ತಂಗಡಿ ಘಟಕದ ಅಧ್ಯಕ್ಷ ವಿಶ್ವ ಭಂಡಾರಿ ಉಜಿರೆ, ಉಡುಪಿ ಘಟಕದ ಅಧ್ಯಕ್ಷ ವಿಶ್ವಾಸ್ ಭಂಡಾರಿ ಮತ್ತಿತರರು ಇದ್ದರು.

ಸಮುದಾಯ ಭವನಕ್ಕೆ ₹ 2 ಕೋಟಿ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್‌, ಭರತ್‌ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮತ್ತಿತರರು ಪಾಲ್ಗೊಂಡಿದ್ದರು.

ಮಂಗಳೂರಿನಲ್ಲಿ ಭಂಡಾರಿ ಸಮುದಾಯ ಭವನ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭರವಸೆ ನೀಡಿರುವುದಾಗಿಯೂ ಕ್ರೀಡಾ ಸಂಗಮಕ್ಕೆ ನಗರಪಾಲಿಕೆಯಿಂದ ಆರ್ಥಿಕ ನೆರವು ಕೊಡಿಸುವುದಾಗಿ ವೇದವ್ಯಾಸ ಕಾಮತ್‌ ಹೇಳಿರುವುದಾಗಿಯೂ ಕೋಶಾಧಿಕಾರಿ ನಿಶಾನ್ ಭಂಡಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.