ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಭಾರತ ಬಂದ್‌ಗೆ ಎಸ್‌ಡಿಪಿಐ ಬೆಂಬಲ

Last Updated 27 ಸೆಪ್ಟೆಂಬರ್ 2021, 13:14 IST
ಅಕ್ಷರ ಗಾತ್ರ

ಮಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಬೆಂಬಲಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಇದನ್ನು ಹೊರತುಪಡಿಸಿದರೆ, ನಗರದಲ್ಲಿ ವಾಹನ ಸಂಚಾರ, ಜನ ಸಂಚಾರ ಎಂದಿನಂತೆಯೇ ಇತ್ತು. ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜುಗಳು ಕಾರ್ಯನಿರ್ವಹಿಸಿದವು.

ಕೇಂದ್ರ ಸರ್ಕಾರದ ತಿದ್ದುಪಡಿ ಮಸೂದೆಗಳ ಅನುಷ್ಠಾನ ವಿರೋಧಿಸಿ, ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ ಅನ್ನು ಬೆಂಬಲಿಸಿ, ಎಸ್‌ಡಿಪಿಐ ಸದಸ್ಯರು ನಗರದ ಕ್ಲಾಕ್ ಟವರ್ ಬಳಿ, ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ, ‘ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವಿನಿಂದಾಗಿ 4 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ವಿರೋಧಿ ನೀತಿಗಳೇ ಸರ್ಕಾರಕ್ಕೆ ಮುಳುವಾಗಿ, ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ’ ಎಂದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಅಶ್ರಫ್ ಕೆ.ಸಿ. ರೋಡ್, ಉತ್ತರ ಕ್ಷೇತ್ರದ ಅಧ್ಯಕ್ಷ ಯಾಸೀನ್ ಅರ್ಕುಳ, ಉಪಾಧ್ಯಕ್ಷ ಲ್ಯಾನ್ಸಿ ತೋರಸ್, ಉಳ್ಳಾಲ ಕ್ಷೇತ್ರದ ಉಪಾಧ್ಯಕ್ಷ ಝಾಕಿರ್ ಉಳ್ಳಾಲ, ಪ್ರಮುಖರಾದ ಶರೀಫ್ ಪಾಂಡೇಶ್ವರ, ಮಹಾನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗರೆ, ಸಿದ್ದೀಕ್ ಬೆಂಗರೆ, ಜಮಾಲ್ ಜೋಕಟ್ಟೆ, ಮುಝಮ್ಮಿಲ್ ನೂಯಿ ಇದ್ದರು.

ಕೆಲಸ ಸ್ಥಗಿತ: ಪ್ರತಿಭಟನೆ

ಶ್ರಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಕೆಲ‌ಹೊತ್ತು ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದರು.

ರಾಜ್ಯ ಹಮಾಲಿ ಕಾರ್ಮಿಕ ಫೆಡರೇಷನ್ ಅಧ್ಯಕ್ಷ ಕೆ.ಮಹಾಂತೇಶ ಮಾತನಾಡಿ, ‘10 ತಿಂಗಳುಗಳಿಂದ ಮೂರು ಕೃಷಿ‌ ಕಾನೂನುಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ‌ಆದರೆ ನರೇಂದ್ರ‌ ಮೋದಿ‌ ನೇತೃತ್ವದ ಬಿಜೆಪಿ ಸರ್ಕಾರ, ರೈತರ ಜತೆ ಮಾತುಕತೆ ನಡೆಸದೆ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದೆ. ನೂತನ ಕೃಷಿ ಮಸೂದೆಗಳು ಕೃಷಿ‌ ಕ್ಷೇತ್ರ ಬಂಡವಾಳಶಾಹಿಗಳ ಪಾಲಾಗಲು ಅವಕಾಶ ನೀಡಲಿವೆ. ದೇಶದ‌ ಭವಿಷ್ಯದ ದೃಷ್ಟಿಯಿಂದ ರೈತರ ಹೋರಾಟವನ್ನು ಕಾರ್ಮಿಕರು ಬೆಂಬಲಿಸಬೇಕು’ ಎಂದರು.

ಬಂದರು ಶ್ರಮಿಕರ‌ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಕಾರ್ಯದರ್ಶಿ ಇಮ್ತಿಯಾಜ್, ಆದಿವಾಸಿ ಹಾಗೂ ದಲಿತ ಹಕ್ಕುಗಳ‌ ಸಮಿತಿಯ ಯೋಗೀಶ್ ಜಪ್ಪಿನಮೊಗರು, ಹರೀಶ ಕೆರೆಬೈಲ್, ಹಂಜಾ ತಂದೊಲಗಿ, ಸಿದ್ದಿಕ್ ಫಾರುಕ್ ಉಲ್ಲಾಳ,‌ ಮಜೀದ್ ಉಲ್ಲಾಳ, ಮಾಧವ ಕಾವೂರು, ಮೊಯಿದಿನ್ ಕಲ್ಕಟ್ಟ, ಯಲ್ಲಪ್ಪ, ಡಿವೈಎಫ್ಐ ಮುಖಂಡರಾದ ಎ.ಬಿ ನೌಶಾದ್, ಹನೀಫ್ ಬೆಂಗ್ರೆ, ಅಸ್ಲಾಂ ಬೆಂಗ್ರೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT