ದಕ್ಷಿಣ ಕನ್ನಡದಲ್ಲಿ ಬಸ್‌ ಸಂಚಾರ ಸ್ತಬ್ಧ: ಬಂಟ್ವಾಳ ಶಾಸಕರ ಕಾರಿಗೆ ಕಲ್ಲು

7

ದಕ್ಷಿಣ ಕನ್ನಡದಲ್ಲಿ ಬಸ್‌ ಸಂಚಾರ ಸ್ತಬ್ಧ: ಬಂಟ್ವಾಳ ಶಾಸಕರ ಕಾರಿಗೆ ಕಲ್ಲು

Published:
Updated:

ಮಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಸೋಮವಾರ ನಡೆದ ಬಂದ್‌ ವೇಳೆ ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ್‌ ನಾಯ್ಕ್‌ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ಶಾಸಕ ಡಿ.ವೇದವ್ಯಾಸ ಕಾಮತ್‌ ಕಾರನ್ನು ಅಡ್ಡಗಟ್ಟಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಬಂಟ್ವಾಳದ ಮೆಲ್ಕಾರ್‌– ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ರಾಜೇಶ್ ನಾಯ್ಕ್ ಅವರ ಫಾರ್ಚುನರ್ ಕಾರಿನ ಮೇಲೆ ಕಲ್ಲು ತೂರಲಾಗಿದೆ. ಈ ಸಂಬಂಧ ಶಾಸಕರು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕಲ್ಲು ತೂರಿದವರು ಮತ್ತು ಬಲವಂತದ ಬಂದ್‌ಗೆ ಕರೆ ನೀಡಿದವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಮಂಗಳೂರಿನ ಜ್ಯೋತಿ ವೃತ್ತದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ರಸ್ತೆ ತಡೆ ನಡೆಯುತ್ತಿದ್ದ ಸ್ಥಳಕ್ಕೆ ಶಾಸಕ ಡಿ.ವೇದವ್ಯಾಸ ಕಾಮತ್‌ ಬಂದಾಗ ಪ್ರತಿಭಟನಾಕಾರರು ಅವರ ಕಾರನ್ನು ಅಡ್ಡಗಟ್ಟಲು ಯತ್ನಿಸಿದರು. ಈ ಸಂದರ್ಭದಲ್ಲಿ ಶಾಸಕರು ಪೊಲೀಸರ ವಿರುದ್ಧ ಹರಿಹಾಯ್ದರು. ನಂತರ ಶಾಸಕರು ಹಾಗೂ ಪ್ರತಿಭಟನಾಕಾರರ ನಡುವೆಯೂ ಮಾತಿನ ಚಕಮಕಿ ನಡೆಯಿತು.

ಬಸ್ಸಿನ ಮೇಲೆ ಕಲ್ಲು: ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಬಂದ ಕೆಲವು ಬಸ್‌ಗಳ ಮೇಲೆ ನಗರದ ಜ್ಯೋತಿ ವೃತ್ತದ ಬಳಿ ಕಲ್ಲು ತೂರಾಟ ನಡೆದಿದೆ. ಕದ್ರಿಯ ಶಿವಭಾಗ್ ಕೆಫೆ ಎಂಬ ಹೋಟೆಲ್‌ ಮೇಲೂ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸಂಚಾರ ಸಂಜೆಯವರೆಗೂ ಸ್ತಬ್ದವಾಗಿತ್ತು. ಆನ್‌ಲೈನ್‌ ಟ್ಯಾಕ್ಸಿ ಸೇವೆ ಕೂಡ ಇರಲಿಲ್ಲ. ಬಹುಪಾಲು ಆಟೊಗಳು ರಸ್ತೆಗೆ ಇಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದ್ ಆಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !