ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಬಿಲ್ಲವ ಸಂಘಟನೆಗಳಿಂದ ನಾರಾಯಣ ಗುರು ಪಠ್ಯ ಸೇರಿಸಲು ಪ್ರತಿಭಟನೆ

10ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ನಾರಾಯಣ ಗುರು ಪಠ್ಯ ಸೇರಿಸಲು ಒತ್ತಾಯ
Last Updated 4 ಜುಲೈ 2022, 14:34 IST
ಅಕ್ಷರ ಗಾತ್ರ

ಬೆಳ್ತಂಗಡಿ : ‘ಹಿಂದೂ ಸಮಾಜವನ್ನು ಉಳಿಸಿದ ನಾರಾಯಣ ಗುರುಗಳಿಗೆ ರಾಜ್ಯದ ಪಠ್ಯ ಪುಸ್ತಕದಲ್ಲಿ ಅವಮಾನ ಆಗಿರುವುದನ್ನು ನೋಡಿಯೂ ಸಮಸ್ತ ಹಿಂದೂ ಸಂಘಟನೆಗಳು ಸುಮ್ಮನಿರುವುದು ವಿಷಾದದ ಸಂಗತಿ. ಪಠ್ಯ ಸೇರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು’ ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು

ಕರ್ನಾಟಕ ರಾಜ್ಯ ಸರ್ಕಾರ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ತೆಗೆದು ಕನ್ನಡ(ಐಚ್ಛಿಕ) ಪಠ್ಯದಲ್ಲಿ ಸೇರಿಸಿರುವುದನ್ನು ಖಂಡಿಸಿಪಟ್ಟಣದಲ್ಲಿ ಸೋಮವಾರ ಗುರುನಾರಾಯಣ ಸ್ವಾಮಿ ಸೇವಾ ಸಂಘ, ತಾಲ್ಲೂಕಿನ ಸಮಸ್ತ ಬಿಲ್ಲವ ಸಂಘಟನೆಗಳು ಹಾಗೂ ಗ್ರಾಮ ಸಮಿತಿಗಳ ಸಹಯೋಗದೊಂದಿಗೆ ನಡೆದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ತಪ್ಪು ಸರಿಪಡಿಸುವಂತೆ ಮೊದಲು ಹೇಳಿದವರು ಬಿಲ್ಲವರು. ಆದರೆ ಪಠ್ಯಪುಸ್ತಕದಲ್ಲಿ ತಪ್ಪಾದ 85 ವಿಚಾರಗಳನ್ನು ಪರಿಷ್ಕರಿಸುವ ಕೆಲಸ ಮಾಡಿರುವ ಸರ್ಕಾರ, ನಾರಾಯಣ ಗುರುಗಳ ವಿಚಾರದಲ್ಲಿ ಅಸಡ್ಡೆ ಮುಂದುವರಿಸಿದೆ. ಅಂದು ಮೇಲ್ವರ್ಗ ಮಾಡಿರುವ ಅನ್ಯಾಯ ಅನಾಚಾರಗಳು ಮಕ್ಕಳಿಗೆ ತಿಳಿಯುವುದು ಬೇಡ ಎಂದು ರೋಹಿತ್ ಚಕ್ರತೀರ್ಥನ ಹುನ್ನಾರವಾಗಿದೆ’ ಎಂದು ದೂರಿದರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ, ‘ಪಠ್ಯದಲ್ಲಿ ಸಮಾಜಕ್ಕೆ ಯಾವುದು ಅಗತ್ಯವಿದೆಯೋ ಅದನ್ನು ಬಿಟ್ಟು ಅವರಿಗೆ ಬೇಕಾದ ಹಾಗೆ ತಿದ್ದುಪಡಿ ಮಾಡಿದ್ದಾರೆ’ ಎಂದರು.

ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಮಾಜಿ ಅಧ್ಯಕ್ಷರುಗಳಾದ ಪದ್ಮನಾಭ ಮಾಣಿಂಜ, ಪಿ.ಕೆ. ರಾಜು ಪೂಜಾರಿ, ಭಗೀರಥ ಜಿ, ಯೋಗೀಶ್ ಕುಮಾರ್, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಗೆಜ್ಜೆಗಿರಿ ಆಡಳಿತ ಮಂಡಳಿಯ ರವಿ ಪೂಜಾರಿ ಚಿಲಿಂಬಿ, ಯುವ ವಾಹಿನಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಬಿಕ್ರೊಟ್ಟು, ಮುಖಂಡರಾದ ಡಾ. ರಾಜಾರಾಮ್ ಕೆ.ಬಿ., ಹರೀಶ್ ಬೈಲಬರಿ, ರಕ್ಷಿತ್ ಶಿವರಾಂ, ಅಭಿನಂದನ್ ಹರೀಶ್ ಕುಮಾರ್, ಲೋಕೇಶ್ ಕೋಡಿಕೆರೆ.

ಗುರುನಾರಾಯಣ ಸಭಾಭವನದಲ್ಲಿ ಗುರುಪೂಜೆ ಬಳಿಕ ಪ್ರತಿಭಟನೆ ನಡೆಯಿತು. ಬಳಿಕ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.

ಮನೋಹರ್ ಕುಮಾರ್ ಇಳಂತಿಲ ನಿರೂಪಿಸಿದರು. ಜಯವಿಕ್ರಮ ಕಲ್ಲಾಪು ಸ್ವಾಗತಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್ ಕುಕ್ಕೇಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT