ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತರು ಎಂದೂ ಮತಾಂತರಕ್ಕೆ ಪ್ರಯತ್ನಿಸಿಲ್ಲ

ಮಡಂತ್ಯಾರಿನಲ್ಲಿ ಕಥೋಲಿಕ್ ಮಹಾ ಸಮಾವೇಶದಲ್ಲಿ ಬೆಳ್ತಂಗಡಿ ಬಿಷಪ್‌ ಲಾರೆನ್ಸ್ ಮುಕ್ಕುಯಿ
Last Updated 2 ಫೆಬ್ರುವರಿ 2020, 12:46 IST
ಅಕ್ಷರ ಗಾತ್ರ

ಉಜಿರೆ: ‘ಕ್ರೈಸ್ತರು ಅಂತರಂಗ ಮತ್ತು ಬಹಿರಂಗದಲ್ಲಿ ಪರಿಶುದ್ಧರಾಗಿ ಯೋಚನೆ, ಮಾತು ಮತ್ತು ಕ್ರಿಯೆಗಳಲ್ಲಿ ಪರಿಶುದ್ಧರಾಗಿದ್ದೇವೆ. ನಾವು ಎಂದೂ ಮತಾಂತರಕ್ಕೆ ಪ್ರಯತ್ನಿಸುವುದಿಲ್ಲ’ ಎಂದು ಬೆಳ್ತಂಗಡಿ ಬಿಷಪ್‌ ಲಾರೆನ್ಸ್ ಮುಕ್ಕುಯಿ ಹೇಳಿದರು.

ಮಡಂತ್ಯಾರು ಸೇಕ್ರೆಡ್ ಹಾರ್ಟ್‌ ಚರ್ಚ್‌ ಮೈದಾನದಲ್ಲಿ ‌ಭಾನುವಾರ ಆಯೋಜಿಸಿದ್ದ ಮಂಗಳೂರು, ಬೆಳ್ತಂಗಡಿ ಮತ್ತು ಪುತ್ತೂರು ಧರ್ಮಪ್ರಾಂತ್ಯಗಳ ಕಥೋಲಿಕ್ ಮಹಾ ಸಮಾವೇಶದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕ್ರೈಸ್ತರು ರಾಜಕೀಯ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು. ಯುವಕ-ಯುವತಿಯರು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಮಾದಕ ದ್ರವ್ಯಗಳ ಷಡ್ಯಂತ್ರಕ್ಕೆ ಬಲಿಯಾಗಬಾರದು. ಯುವತಿಯರು ಸುರಕ್ಷಿತವಾಗಿರಬೇಕು ಎಂದು ಅವರು ಸಲಹೆ ನೀಡಿದರು.

ಗಂಧ, ರಕ್ತಚಂದನ ಮತ್ತು ಬೀಟಿ ಗಿಡ ನೆಡುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದ ಮಂಗಳೂರು ಬಿಷಪ್‌ ಪೀಟರ್ ಪಾವ್ಲ್ ಸಲ್ದಾನ್ಹಾ ಮಾತನಾಡಿ, ‘ ಕ್ರೈಸ್ತರು ಅಲ್ಪ ಸಂಖ್ಯಾತರಾಗಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು’ ಎಂದು ಅವರು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಕಥೋಲಿಕ್ ಸಭಾದ ಅಧ್ಯಕ್ಷ ಪೌಲ್ ರೋಲ್ಫಿ ಡಿಕೋಸ್ತ ಮಾತನಾಡಿ, ‘ಕಥೋಲಿಕರು ನೆರೆ ಸಂತ್ರಸ್ತರಿಗೆ ₹3 ಕೋಟಿ ನೆರವು ನೀಡಿದ್ದೇವೆ’ ಎಂದು ಅವರು ಪ್ರಕಟಿಸಿದರು.

ಹಿರಿಯ ಸಮಾಜ ಸೇವಕ ಹಾಗೂ ದಾನಿ ರೊನಾಲ್ಡ್ ಕುಲಾಸೊ ಅವರನ್ನು ‘ವಿಶ್ವ ಪುರುಷ’ ಬಿರುದು ನೀಡಿ ಗೌರವಿಸಲಾಯಿತು.
‘ ಕ್ರೈಸ್ತರು ಬಲವಂತದ ಮತಾಂತರ ಮಾಡುತ್ತಾರೆ ಎಂಬುದು ಸುಳ್ಳು . ಚರ್ಚ್‌ಗಳಲ್ಲಿ ದಲಿತರು, ಹಿಂದುಳಿದವರಿಗೂ ಸಮಾನ ಅವಕಾಶ ನೀಡುತ್ತೇವೆ’ ಎಂದು ಹೇಳಿದರು. ಕ್ರೈಸ್ತ ಅಭಿವೃದ್ಧಿ ಮಂಡಳಿ ರಚಿಸಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ಪ್ರಕಟಿಸಿದರು. ಉಪಾಹಾರ ಒದಗಿಸಿದ ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಲಾಯಿತು.

ಸಮಾವೇಶದ ಸಂಚಾಲಕ ಜೊಯೆಲ್ ಮೆಂಡೋನ್ಸಾ, ಪ್ರಧಾನ ಕಾರ್ಯದರ್ಶಿ ವಾಲ್ಟರ್ ಮೋನಿಸ್ , ವಿವೇಕ್ ಪಾಸ್ ಮತ್ತು ಫ್ರಾನ್ಸಿಸ್ ವಿ.ವಿ. ಇದ್ದರು. ಚರ್ಚ್‌ನಲ್ಲಿ ದಿವ್ಯ ಬಲಿಪೂಜೆ , ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT