ಗುರುವಾರ , ಸೆಪ್ಟೆಂಬರ್ 23, 2021
24 °C
ಶಾಸಕ ಯು.ಟಿ. ಖಾದರ್‌ಗೆ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್

'ಲವ್ ಜಿಹಾದ್ ವಿರುದ್ಧ ಪ್ರಶ್ನಿಸಿದರೆ ಕೇಳಲು ನೀವು ಯಾರು'?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ದೇಶದ ಯಾವುದೇ ಭಾಗದಲ್ಲಿ ಲವ್ ಜಿಹಾದ್, ಮತಾಂತರ, ಉಗ್ರರ ಕೃತ್ಯ ನಡೆದರೂ ನಾವು ಪ್ರಶ್ನೆ ಮಾಡಿಯೇ ಮಾಡುತ್ತೇವೆ. ಅದನ್ನ ಕೇಳಲಿಕ್ಕೆ ನೀವು ಯಾರು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಶಾಸಕ ಯು.ಟಿ. ಖಾದರ್ ಅವರಿಗೆ ಸವಾಲೆಸೆದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಎನ್‌ಐಎ ತನಿಖೆ ಕುರಿತು ಗೊಂದಲದ ಹೇಳಿಕೆ ಬೇಡ ಎಂಬ ಖಾದರ್ ಹೇಳಿಕೆ ಖಂಡನೀಯ. ಕಾಂಗ್ರೆಸ್‌ನ ಮಾಜಿ ಶಾಸಕರ ಮನೆಯಲ್ಲಿ ನಡೆದ ಲವ್ ಜಿಹಾದ್ ಹಾಗೂ ಉಗ್ರರ ಜೊತೆಗಿನ ಸಂಬಂಧದ ವಿಚಾರವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಘಟಕ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯನ್ನು ಬಿಜೆಪಿ ಸಮರ್ಥಿಸುತ್ತದೆ. ಏಳು ದಶಕಗಳಿಂದ ಲವ್ ಜಿಹಾದ್, ಗೋಹತ್ಯೆ, ಮತಾಂತರ ಇವೆಲ್ಲದರ ವಿರುದ್ಧ ಹೋರಾಟ ಮಾಡುತ್ತ ಬರಲಾಗಿದೆ’ ಎಂದರು.

ಯು.ಟಿ.ಖಾದರ್ ಬಾಲಿಶ ಹೇಳಿಕೆ ನೀಡಿದ್ದಾರೆ. ಇದಿನಬ್ಬರ ಮೊಮ್ಮಗಳು ಮತ್ತು ಅವಳ ಗಂಡ ಐಸಿಸಿಗೆ ಸೇರಿರುವುದು ದಾಖಲೆ ಮೂಲಕ ಸಾಬೀತಾಗಿದೆ. ಈ ಮೂಲಕ ಇದಿನಬ್ಬರ ಕುಟುಂಬಕ್ಕೆ ಭಯೋತ್ಪಾದಕರ ನಂಟಿದೆ, ಲವ್ ಜಿಹಾದ್ ನಂಟಿದೆ ಎಂಬುದು ಸಾಬೀತಾಗಿದೆ’ ಎಂದ ಅವರು, ‘ಉಳ್ಳಾಲದಲ್ಲಿ ಹೊರಗಿನವರು ಬಂದು ಪ್ರತಿಭಟನೆ ಮಾಡಿದ್ದಾರೆ ಎಂಬ ಯು.ಟಿ. ಖಾದರ್ಹೇಳಿಕೆಗೆ ಪ್ರತಿಕ್ರಿಯಿಸಿ, ‘ಉಳ್ಳಾಲ ಪಾಕಿಸ್ತಾನದಲ್ಲಿಲ್ಲ. ಅದು ನಮ್ಮಲ್ಲೇ ಇದೆ’ ಎಂದರು.

ಜನಾಶೀರ್ವಾದ ಯಾತ್ರೆ: ಕೇಂದ್ರದಲ್ಲಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ದೇಶದ ವಿವಿಧ ರಾಜ್ಯ, ಜಿಲ್ಲೆಗಳನ್ನು ಸುತ್ತಾಡಿ ಜನಾಶೀರ್ವಾದ ಪಡೆಯಲೆಂಬ ಸಂಕಲ್ಪದಿಂದ ಬಿಜೆಪಿ ರಾಷ್ಟ್ರೀಯ ಸಮಿತಿ ಹಮ್ಮಿಕೊಂಡಿರುವ ‘ಜನಾಶೀರ್ವಾದ ಯಾತ್ರೆ’ ವಿವಿಧ ತಂಡಗಳಲ್ಲಿ ನಡೆಯುತ್ತಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ನೇತೃತ್ವದ ತಂಡ ಆಗಸ್ಟ್ 17ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿದೆ ಎಂದು ಸುದರ್ಶನ್ ತಿಳಿಸಿದರು.

ಜಿಲ್ಲಾಡಳಿತದ ಸೂಚನೆಯಂತೆ ಕೋವಿಡ್ ಮಾರ್ಗಸೂಚಿ ಪಾಲಿಸಬೇಕಾಗಿರುವುದರಿಂದ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ. 17ರ ಸಂಜೆ 6 ಗಂಟೆಗೆ ಹೆಜಮಾಡಿಯಲ್ಲಿ ಜನಾಶೀರ್ವಾದ ಯಾತ್ರೆಯನ್ನು ಬಿಜೆಪಿ ಘಟಕ ಸ್ವಾಗತಿಸಲಿದೆ. ಈ ತಂಡದಲ್ಲಿ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಕೇಶವ ಪ್ರಸಾದ್, ಪದಾಧಿಕಾರಿಗಳು, ಶಾಸಕ ಸಂಜೀವ ಮಠಂದೂರು ಇದ್ದಾರೆ ಎಂದರು.

ಸಚಿವ ರಾಜೀವ್ ಚಂದ್ರಶೇಖರ್ ಅವರು ಆಗಸ್ಟ್ 17ರ ಸಂಜೆ ಜಿಲ್ಲೆಯ ಪ್ರತಿಷ್ಠಿತ ಉದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಮುಖರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. 18ರ ಬೆಳಿಗ್ಗೆ ಕದ್ರಿ ಮಂಜುನಾಥನ ದರ್ಶನ, 9.30ಕ್ಕೆ ಜಿಲ್ಲೆಯ ವಿವಿಧ ಸಮುದಾಯಗಳ ಪ್ರಮುಖರ ಜತೆ ಸಂವಾದ ನಡೆಸಿ, ನಂತರ ಕೊಡಗಿಗೆ ತೆರಳುವರು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ವಕ್ತಾರರಾದ ರವಿಶಂಕರ ಮಿಜಾರು, ಜಗದೀಶ ಶೇಣವ, ಪ್ರಧಾನ
ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು