ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ: ಗರಿಗೆದರಿದ ಪಕ್ಷಾಂತರ

ಜಿ.ಪಂ., ತಾ.ಪಂ. ಸದಸ್ಯರು ಸೇರಿ ಕಾಂಗ್ರೆಸ್‌ ಮುಖಂಡರು ಬಿಜೆಪಿಗೆ
Last Updated 19 ಡಿಸೆಂಬರ್ 2020, 3:36 IST
ಅಕ್ಷರ ಗಾತ್ರ

ಮಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿಯೇ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಜಿಲ್ಲಾ ನಾಯಕ ಮಾಧವ ಮಾವೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾವೆ, ತಾಲ್ಲೂಕು ಪಂಚಾಯಿತಿ ಸದಸ್ಯ ಕುಮಾರ ಭಟ್ಟ ಬದಿಕೋಡಿ ಇನ್ನಿತರರನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡಬಿದಿರೆ, ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಧವ ಮಾವೆ, ‘ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದೆ. ಆದರೆ ಕಾಂಗ್ರೆಸ್ ತೊರೆಯಲು ನನಗೆ ಹಲವಾರು ಕಾರಣಗಳಿವೆ. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಉಳಿಗಾಲ ಇಲ್ಲ’ ಎಂದರು.

ಪಂಚಾಯಿತಿ ಚುನಾವಣೆಗೆ ನಾಲ್ಕು ದಿನಗಳಿರುವಾಗಲೇ ಕಾಂಗ್ರೆಸ್‌ ಇಬ್ಭಾಗವಾಗಿದೆ. ನಾಯಕತ್ವದ ಕೊರತೆ, ಸತತ ಸೋಲಿನ ವೈಫಲ್ಯದಿಂದ ಬೇಸತ್ತು ಬಂಟ್ವಾಳದ ಇನ್ನಷ್ಟು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೆ ತುದಿಗಾಲಲ್ಲಿ ನಿಂತಿದ್ದು, ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂಬರುವ ಪಂಚಾಯಿತಿ ಚುನಾವಣೆಗೆ ಮೊದಲೇ ಪರೋಕ್ಷವಾಗಿ ಬಂಟ್ವಾಳದಲ್ಲಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.

ಮಾಧವ ಮಾವೆ ಅವರ ಪತ್ನಿ ಮಂಜುಳಾ ಮಾವೆ ಕಾಂಗ್ರೆಸ್‌ನಿಂದ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ತಾಲ್ಲೂಕು ಪಂಚಾಯಿತಿ ಕಾಂಗ್ರೆಸ್ ಸದಸ್ಯ ಕುಮಾರ್ ಭಟ್ ಕೂಡಾ ಇತ್ತೀಚಿಗೆ ವಿಟ್ಲದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷದ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಅವರು ಮಂಗಳೂರಿನಲ್ಲಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಹನೀಫ್ ಪಾಜಪಳ್ಳ ಹಾಗೂ ಅವರ ಬೆಂಬಲಿಗರು ಇದೇ ವೇಳೆ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಜಗದೀಶ್ ಶೇಣವ, ರವಿಶಂಕರ್ ಮಿಜಾರ್, ರಾಜೇಶ್ ಕಾವೇರಿ, ಸುಧೀರ್ ಶೆಟ್ಟಿ ಕಣ್ಣೂರ ಇದ್ದರು.

‘ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಇಲ್ಲ’

ಕಾಂಗ್ರೆಸ್ಸಿಗರಿಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಮೂಡುಬಿದಿರೆ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಒಂದೇ ಕುಟುಂಬದ ಮೂವರನ್ನು ಕಣಕ್ಕಿಳಿಸಿದೆ ಎಂದು ಟೀಕಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಬಿಜೆಪಿ ಬೆದರಿಸುವ ತಂತ್ರ ಅನುಸರಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ತಳಮಟ್ಟದಲ್ಲಿಯೇ ಬಲಿಷ್ಠವಾಗಿದೆ. ಹಾಗಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳನ್ನು ಬೆದರಿಸುವ ಅಗತ್ಯವೇ ಇಲ್ಲ ಎಂದರು.

ಕಾಂಗ್ರೆಸ್ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತದೆಯೇ ಹೊರತು, ಬಿಜೆಪಿ ಅಲ್ಲ. ಮೂರು ದಶಕಗಳ ಹಿಂದೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ, ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್‌ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT