ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ 3,700 ಮತ ಗಳಿಕೆ ಗುರಿ

ಪರಿಷತ್ ಚುನಾವಣೆಗೆ ತಂತ್ರ: ‘ಒಬ್ಬನೇ ಅಭ್ಯರ್ಥಿ ಒಂದೇ ಮತ’
Last Updated 4 ಡಿಸೆಂಬರ್ 2021, 3:02 IST
ಅಕ್ಷರ ಗಾತ್ರ

ಮಂಗಳೂರು: ವಿಧಾನ ಪರಿಷತ್‌ ಚುನಾವಣೆಯ ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದಲ್ಲಿ ಒಬ್ಬರನ್ನೇ ಕಣಕ್ಕಿಳಿಸಿರುವ ಬಿಜೆಪಿ, ಮತಗಳು ಅಸಿಂಧು ಆಗದಂತೆ ಎಚ್ಚರಿಕೆ ವಹಿಸಿದೆ. ಎಲ್ಲ ಮತಗಳು ಮೊದಲ ಪ್ರಾಶಸ್ತ್ಯದ ಮತಗಳಾಗಿ ಚಲಾವಣೆ ಆಗಬೇಕು ಎನ್ನುವ ಕಾರ್ಯತಂತ್ರ ರೂಪಿಸಿದೆ.

ಈಗಾಗಲೇ ಉಭಯ ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ಆರಂಭಿಸಿರುವ ಬಿಜೆಪಿ ನಾಯಕರು, ‘ಒಬ್ಬನೇ ಅಭ್ಯರ್ಥಿ ಒಂದೇ ಮತ’ ಎನ್ನುವ ಧ್ಯೇಯವಾಕ್ಯದೊಂದಿಗೆ ಮತಯಾಚನೆ ಮಾಡುತ್ತಿದ್ದಾರೆ. ಈ ಮೂಲಕ ಮತದಾರರಲ್ಲಿ ಗೊಂದಲ ಉಂಟಾಗಬಾರದು. ಮೊದಲ ಪ್ರಾಶಸ್ತ್ಯದ ಮತವನ್ನಷ್ಟೇ ಚಲಾಯಿಸಬೇಕು ಎನ್ನುವ ಸಂದೇಶವನ್ನು ನೀಡಲಾಗುತ್ತಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ 250ಕ್ಕೂ ಅಧಿಕ ಮತಗಳು ಅಸಿಂಧು ಆಗಿದ್ದವು. ಈ ಬಾರಿ ಅಂತಹ ಪರಿಸ್ಥಿತಿ ನಿರ್ಮಾಣ ಆಗಬಾರದು. ದೊಡ್ಡ ಪ್ರಮಾಣದಲ್ಲಿ ಮತಗಳು ಅಸಿಂಧು ಆಗುವುದನ್ನು ತಡೆಯಲು ಬಿಜೆಪಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಕೋಟ ಆಯ್ಕೆಗಾಗಿ ಒಬ್ಬರೇ ಅಭ್ಯರ್ಥಿ:

ಮತದಾರರು ಗೊಂದಲಕ್ಕೆ ಒಳಗಾಗಬಾರದು. ಕೋಟ ಶ್ರೀನಿವಾಸ ಪೂಜಾರಿ ಅವರ ಆಯ್ಕೆಯನ್ನು ಖಚಿತಪಡಿಸುವ ಉದ್ದೇಶದಿಂದಲೇ ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಬಿಜೆಪಿ ಮುಖಂಡರೇ ಹೇಳುವ ಪ್ರಕಾರ, ಎರಡೂ ಸ್ಥಾನಗಳನ್ನು ಗೆಲ್ಲುವುದಕ್ಕೆ ಕೆಲವೇ ಮತಗಳ ಕೊರತೆ ಆಗಲಿದೆ. ಅದಾಗ್ಯೂ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ, ಮೊದಲ ಹಾಗೂ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆಗೆ ಮತದಾರರದಲ್ಲಿ ಗೊಂದಲ ಸೃಷ್ಟಿ ಆಗಬಹುದು. ಇದರಿಂದ ಕೋಟ ಶ್ರೀನಿವಾಸ ಪೂಜಾರಿ ಅವರ ಆಯ್ಕೆಗೆ ತೊಂದರೆ ಆಗಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಮುಖಂಡರದ್ದಾಗಿದೆ.

ಜೊತೆಗೆ ಈ ಬಾರಿ ಬಿಜೆಪಿ ಮತದಾರರು ಕೇವಲ ಒಂದು ಮತ ಚಲಾಯಿಸಬೇಕು ಎಂದು ಹೇಳುವ ಮೂಲಕ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆಗೆ ಮುಂದಾಗದಿರಲಿ, ಗೊಂದಲದಿಂದ ಬೇರೆ ಯಾರಿಗಾದರೂ ಮತ ನೀಡದಿರಲಿ ಎನ್ನುವ ಚಿಂತನೆಯೂ ನಾಯಕರದ್ದಾಗಿದೆ. ಹೀಗಾಗಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಒಂದೇ ಮತವನ್ನು ಚಲಾಯಿಸಿ ಎಂದು ಬಿಜೆಪಿ ಮುಖಂಡರು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.

3,700 ಮತಗಳ ಗುರಿ:

ಉಭಯ ಜಿಲ್ಲೆಗಳಲ್ಲಿ 3,500ಕ್ಕೂ ಅಧಿಕ ಮತಗಳಿವೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ, ಈ ಚುನಾವಣೆಯಲ್ಲಿ ಬೇರೆ ಪಕ್ಷಗಳ 200 ಮತಗಳನ್ನು ಪಡೆಯುವ ಮೂಲಕ 3,700 ಮತಗಳು ಬಿಜೆಪಿ ಅಭ್ಯರ್ಥಿಗೆ ದೊರೆಯಬೇಕು ಎನ್ನುವ ಮನವಿಯನ್ನು ಪಕ್ಷದ ಮುಖಂಡರು ಮತದಾರರಿಗೆ ಮಾಡುತ್ತಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಅವರ ಗೆಲುವಿಗೆ ಯಾವುದೇ ತೊಡಕಾಗಬಾರದು. 3,700 ಮತಗಳ ಗುರಿಯನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದಲ್ಲಿ, ಗೆಲುವು ಸುಲಭ ಸಾಧ್ಯವಾಗಲಿದೆ ಎಂದು ಬಿಜೆಪಿ ಮುಖಂಡರೊಬ್ಬರು
ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT