ಗುರುವಾರ , ನವೆಂಬರ್ 14, 2019
19 °C
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ

ಬಿ.ಎಲ್.ಸಂತೋಷ್ ಗುಂಡಿ ಒತ್ತಿದರೆ ನಳಿನ್ ಡ್ಯಾನ್ಸ್: ಸಿದ್ದರಾಮಯ್ಯ

Published:
Updated:

ಮಂಗಳೂರು: ರಾಜ್ಯ ಬಿಜೆಪಿಯ ರಿಮೋಟ್ ಬಿ.ಎಲ್.ಸಂತೋಷ್ ಕೈಯಲ್ಲಿ ಇದೆ. ಸಂತೋಷ್ ಗುಂಡಿ ಒತ್ತಿದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಡ್ಯಾನ್ಸ್ ಮಾಡುತ್ತಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಕ್ತವಾಗಿ ಕೆಲಸ ಮಾಡುವ ಸ್ವಾತಂತ್ರ್ಯ ಇಲ್ಲ. ಸಂತೋಷ್ ಕುಣಿಸಿದಂತೆ ಎಲ್ಲವೂ ಆಗಬೇಕಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಾಲಿಗೆ ಯಡಿಯೂರಪ್ಪ ಒಲ್ಲದ ಶಿಶು ಆಗಿದ್ದಾರೆ' ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಾಗುತ್ತಿದೆ. ಈ ಅವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆಯ ಹೊರತಾಗಿ ಯಾವ ಕೆಲಸವೂ ಆಗಿಲ್ಲ. ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಕೆಲಸವನ್ನೂ ಸರ್ಕಾರ ಸರಿಯಾಗಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

'ಯಡಿಯೂರಪ್ಪ ಅವರು ಮಾತೆತ್ತಿದರೆ ಬೊಕ್ಕಸದಲ್ಲಿ ಹಣವಿಲ್ಲ ಎನ್ನುತ್ತಾರೆ. ಇವರಿಗೆ ಸರ್ಕಾರ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ತೊಲಗಲಿ. ನಾವಾದರೂ ಆಡಳಿತ ನಡೆಸುತ್ತೇವೆ' ಎಂದರು.

ಸಬ್ ಕಾ ವಿನಾಶ್: 'ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಹಸಿವು ಸೂಚ್ಯಂಕದಲ್ಲಿ ಭಾರತವು ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ದೇಶಗಳಿಗಿಂತಲೂ ಕೆಳಕ್ಕೆ ಇಳಿದಿರುವುದು ಇದಕ್ಕೆ ಸಾಕ್ಷಿ. ಮೋದಿ ಮಾತು ಮಾತಿಗೂ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಅನ್ನುತ್ತಾರೆ. ಈಗ ಸಬ್ ಕಾ ವಿಶ್ವಾಸ್ ಎಂಬುದನ್ನೂ ಹೇಳುತ್ತಿದ್ದಾರೆ. ಜನರ ಪರಿಸ್ಥಿತಿ ಸಬ್ ಕಾ ವಿನಾಶ್ ಎಂಬಂತಾಗಿದೆ' ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)