ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರ್‌ ಬಾಂಬ್‌ ಸ್ಫೋಟ ಗುಪ್ತಚರ ವೈಫಲ್ಯ 

ಪಾಲಿಕೆ ಸದಸ್ಯ ವಿನಯರಾಜ್ ಆರೋಪ
Last Updated 23 ನವೆಂಬರ್ 2022, 16:15 IST
ಅಕ್ಷರ ಗಾತ್ರ

ಮಂಗಳೂರು: ‘ಗರೋಡಿಯಲ್ಲಿ ನ.19ರಂದು ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣವು ರಾಜ್ಯ ಪೊಲೀಸ್‌ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಇದರ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು’ ಎಂದು ಪಾಲಿಕೆ ಸದಸ್ಯ ‌ಎ.ಸಿ.ವಿನಯರಾಜ್ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಜನಜಂಗುಳಿ ಇರುವ ಕಡೆ ಬಾಂಬ್‌ ಸ್ಫೋಟಗೊಂಡಿದ್ದರೆ ಅಮಾಯಕರು ಬಲಿಯಾಗುತ್ತಿದ್ದರು. ಘಟನೆಯ ಹಿಂದೆ ಇರುವ ಶಕ್ತಿಗಳನ್ನು ನಿಗ್ರಹಿಸಬೇಕು. ಕೃತ್ಯಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಕಾನೂನುಬಾಹಿರ ಚಟುವಟಿಕೆ ತಡೆ (ಯುಎಪಿ) ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಬೇಕು’ ಎಂದರು.

‘ಈ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್ ಉಗ್ರಗಾಮಿ ಸಂಘಟನೆಗಳನ್ನು ಬೆಂಬಲಿಸಿ 2020ರಲ್ಲಿ ಗೋಡೆ ಬರಹ ಬರೆದ ಪ್ರಕರಣದಲ್ಲೂ ಪ್ರಮುಖ ಆರೋಪಿ. ಆತನ ಬಗ್ಗೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕಿತ್ತು. ಪ್ರಕರಣದ ದೋಷಾರೋಪ ಪಟ್ಟಿ ಸಲ್ಲಿಸುವಾಗ ವಿಳಂಬವಾಗಿದ್ದರಿಂದ ಹೈಕೋರ್ಟ್‌ನಲ್ಲಿ ಆರೋಪಿಗೆ ಜಾಮೀನು ಸಿಕ್ಕಿದೆ. ಗೃಹ ಇಲಾಖೆಯು ನಿರ್ಲಕ್ಷ ವಹಿಸಿದ್ದೇ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ಕಾರಣ’ ಎಂದು ಆರೋಪಿಸಿದರು.

‘ಜಾಮೀನು ಸಿಕ್ಕಿದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನ ವಿರುದ್ಧ ಬಂಧನದ ವಾರೆಂಟ್ ಜಾರಿಯಾಗಿದ್ದರೂ ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ತಿಂಗಳಿಗೊಮ್ಮೆ ಠಾಣೆಗೆ ಕರೆಸಿ ಆತನ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲೂ ಪ್ರಯತ್ನಿಸಿಲ್ಲ. ಇವೆಲ್ಲವೂ ಪೊಲೀಸ್‌ ಇಲಾಖೆಯ ವೈಫಲ್ಯ’ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅನಿಲ್ ಪೂಜಾರಿ, ಅಪ್ಪಿ, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ರಾಕೇಶ್ ದೇವಾಡಿಗ, ನೀರಜ್ ಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT