ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿಗೆ ನಿಲುಕದ ಜೀವ ಬಾಂಧವ್ಯ: ರೋಗಿಗಳ ಪಾಲಿನ ಆಪದ್ಬಾಂಧವರು ರಕ್ತದಾನಿಗಳು

ರೋಗಿಗಳ ಪಾಲಿನ ಆಪದ್ಬಾಂಧವರು ರಕ್ತದಾನಿಗಳು
Last Updated 13 ಜೂನ್ 2022, 19:30 IST
ಅಕ್ಷರ ಗಾತ್ರ

ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿರುವ ಬ್ಲಡ್‌ ಬ್ಯಾಂಕ್‌ಗೆ ಸ್ವಯಂ ಪ್ರೇರಿತ ರಕ್ತದಾನಿಗಳೇ ಆಧಾರ. ಬದುಕಿನ ನಾನಾ ಒತ್ತಡದ ನಡುವೆಯೂ, ಯಾವುದೇ ಪ್ರತಿಫಲ ನಿರೀಕ್ಷಿಸದೆ, ರಕ್ತದಾನ ಮಾಡಿ, ಆ ಮೂಲಕ ಮನಸ್ಸು ಮತ್ತು ದೇಹವನ್ನು ಹಗುರವಾಗಿಸಿಕೊಳ್ಳುವ ಈ ಮಹಾದಾನಿಗಳು ರೋಗಿಗಳ ದೃಷ್ಟಿಗೆ ನಿಲುಕದ ಆಪದ್ಬಾಂಧವರು.

ವೆನ್ಲಾಕ್ ಆಸ್ಪತ್ರೆಯ ರಕ್ತ ನಿಧಿ ಘಟಕದಲ್ಲಿ ತಿಂಗಳಿಗೆ ಸರಾಸರಿ 1,000 ಯುನಿಟ್ ರಕ್ತ ಸಂಗ್ರಹವಾಗುತ್ತದೆ. ಸಂಘ–ಸಂಸ್ಥೆಗಳು, ಸ್ವಯಂ ಪ್ರೇರಿತ ರಕ್ತದಾನಿಗಳು ಇದಕ್ಕೆ ಕೈ ಜೋಡಿಸುತ್ತಾರೆ.

‘ಬ್ಲಕ್ ಬ್ಯಾಂಕ್‌ನಲ್ಲಿ ಸಂಗ್ರಹಿಸುವ 1,000 ಯುನಿಟ್‌ಗಳಲ್ಲಿ ಪ್ಲೇಟ್ಲೆಟ್, ಕ್ರಯೊ ಪ್ರೆಸಿಪಿಟೇಟ್, ಆರ್‌ಬಿಸಿ ಹೀಗೆ ಬೇರೆ ಬೇರೆ ರೀತಿಯಲ್ಲಿ ವಿಭಜಿಸಿ, 2,800 ಯುನಿಟ್‌ಗಳನ್ನು ಸಿದ್ಧಪಡಿಸಿ, ರೋಗಿಗಳಿಗೆ ನೀಡಲಾಗುತ್ತದೆ. ಪ್ರತಿ ತಿಂಗಳು ಬೇಡಿಕೆ ಇರುವಷ್ಟು ಪ್ರಮಾಣದ ರಕ್ತ ಕ್ಯಾಂಪ್‌ಗಳು, ಆಸ್ಪತ್ರೆಗೆ ಬರುವ ದಾನಿಗಳ ಮೂಲಕ ಸಂಗ್ರಹವಾಗುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದ ವೇಳೆ ಒಂದೆರಡು ತಿಂಗಳುಗಳ ಹಿಂದೆ ಕೊಂಚ ಕೊರತೆಯಾಗಿತ್ತು. ಈಗ ಅಂತಹ ಸಂದರ್ಭ ಇಲ್ಲ’ ಎಂದು ಬ್ಲಡ್‌ ಬ್ಯಾಂಕ್ ಅಧಿಕಾರಿ ಡಾ. ಶರತ್ ತಿಳಿಸಿದರು.

‘ಆರೋಗ್ಯವಂತ ಪುರುಷ ತನ್ನ 18ನೇ ವರ್ಷದಿಂದ ಆರಂಭಿಸಿ 65 ವರ್ಷದವರೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಮಹಿಳೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಮೊದಲ ಬಾರಿ ರಕ್ತದಾನ ಮಾಡುವವರು 60 ವರ್ಷಗಳ ಒಳಗೆ ಮಾತ್ರ ರಕ್ತದಾನ ಮಾಡಬಹುದು. ಎಚ್‌ಐವಿ, ಹೆಪಟೈಟಿಸ್ ಬಿ ಬಂದ ಮೇಲೆ ಸ್ವಯಂ ಪ್ರೇರಿತ ರಕ್ತದಾನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದರ ನಂತರ ಸೋಂಕಿನ ಪ್ರಮಾಣವೂ ಕಡಿಮೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಈ ಭಾಗದಲ್ಲಿ 10 ಸಾವಿರಕ್ಕೂ ಅಧಿಕ ರಕ್ತದಾನಿಗಳು ಇದ್ದಾರೆ. ಅವರಲ್ಲಿ 500ರಷ್ಟು ದಾನಿಗಳು ನಿರಂತರವಾಗಿ ರಕ್ತದಾನ ಮಾಡುತ್ತಾರೆ. ಇನ್ನು ಕೆಲವರು ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ರಕ್ತ ಕೊಡುತ್ತಾರೆ. ಬ್ಲಡ್ ಬ್ಯಾಂಕ್‌ನಲ್ಲಿ ತುರ್ತು ಅಗತ್ಯವಿರುವ ರೋಗಿಗಳ ಜತೆಗೆ, ಥಲಸ್ಸೇಮಿಯಾದಿಂದ ಬಳಲುತ್ತಿರುವ 127 ಮಕ್ಕಳಿಗೆ ರಕ್ತ ನೀಡಲಾಗುತ್ತದೆ. ಹಿಮೊಫೀಲಿಯಾ ಮಕ್ಕಳಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಡಾ. ಶರತ್ ಪ್ರತಿಕ್ರಿಯಿಸಿದರು.

ಎಫೆರೆಸಿಸ್ ತಂತ್ರಜ್ಞಾನ: ಕೊರೊನಾ ನಂತರದ ದಿನಗಳಿಂದ ಆಸ್ಪತ್ರೆಯಲ್ಲಿ ಎಫೆರೆಸಿಸ್ ತಂತ್ರಜ್ಞಾನ ಬಳಸಿ ರಕ್ತ ಪಡೆಯಲಾಗುತ್ತಿದೆ. ಈ ತಂತ್ರಜ್ಞಾನದ ಅಡಿಯಲ್ಲಿ ರೋಗಿಗಳಿಗೆ ಅವಶ್ಯವಿರುವ ಕಾಂಪೊನೆಂಟ್‌ ಅನ್ನು ದಾನಿಗಳ ದೇಹದಿಂದ ತೆಗೆದು, ಉಳಿದ ರಕ್ತವನ್ನು ಪುನಃ ದಾನಿಗಳ ದೇಹಕ್ಕೆ ಸೇರಿಸಲಾಗುತ್ತದೆ. ಈ ರೀತಿ ದಾನಿಗಳು ತಿಂಗಳಿಗೆ ಎರಡು ಬಾರಿ ದಾನ ಮಾಡಬಹುದು.

‘ರಾಜ್ಯದ ಮೊದಲ ಕೇಂದ್ರ’

ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಈಗ ಇಮ್ಯುನೊ ಹೆಮಟಾಲಜಿ ಮತ್ತು ಬ್ಲಡ್ ಟ್ರಾನ್ಸ್‌ಫ್ಯೂಷನ್ ಇನಸ್ಟಿಟ್ಯೂಟ್ ಆಗಿದೆ. ಇಲ್ಲಿ ಮೆಡಿಕಲ್ ಪಿಜಿ ಅಧ್ಯಯನ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳು ಇದ್ದಾರೆ. ಕರ್ನಾಟಕದಲ್ಲಿ ಇದು ಮೊದಲ ಕೇಂದ್ರವಾಗಿದೆ. ದಕ್ಷಿಣ ಭಾರತದಲ್ಲಿ ಹೈದ್ರಾಬಾದ್‌ ಹೊರತುಪಡಿಸಿದರೆ, ಈ ಕೇಂದ್ರ ಇರುವುದು ಮಂಗಳೂರಿನಲ್ಲಿ ಮಾತ್ರ ಎಂದು ಡಾ. ಶರತ್ ತಿಳಿಸಿದರು.

152 ಬಾರಿ ರಕ್ತ ನೀಡಿದ ದಾನಿ

‘ಎಂಬಿಬಿಎಸ್ ಓದುವಾಗ ಒಂದು ಮಗುವಿಗೆ ರಕ್ತದ ತುರ್ತು ಅಗತ್ಯವಿತ್ತು. ನಾನು ನೀಡಿದ ರಕ್ತದಿಂದ ಆ ಮಗು ಬದುಕಿತು. ಜೀವ ಉಳಿಸಿದ ತೃಪ್ತಿ ಮನಸ್ಸಿಗೆ ಸಮಾಧಾನ ನೀಡಿತು. ಆಗ ನನಗೆ 22 ವರ್ಷ, ಅಲ್ಲಿಂದ ಇಲ್ಲಿಯವರೆಗೆ 152 ಬಾರಿ ರಕ್ತ ದಾನ ಮಾಡಿದ್ದೇನೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತೇನೆ. ಒಂಬತ್ತು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದೇನೆ’ ಎನ್ನುವಾಗ ಡಾ. ಎಸ್. ಸುದೇಶ್ ಶಾಸ್ತ್ರಿ ಅವರಿಗೆ ಸಂತೃಪ್ತ ಭಾವ.

‘ಇತ್ತೀಚಿನ ಸಂಶೋಧನೆಯ ಪ್ರಕಾರ ನಿರಂತರ ರಕ್ತದಾನ ಮಾಡುವವರಿಗೆ ಹೃದಯಾಘಾತ ಕಡಿಮೆ. ರಕ್ತದಲ್ಲಿ ತಾಜಾತನ ಇರುವ ಕಾರಣ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT