ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬ್ಬಿದ ರಕ್ತನಾಳ –‘ವೇರಿಕೋಸ್ ವೇನ್ಸ್

Last Updated 15 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಉಬ್ಬದ ರಕ್ತನಾಳ ಎನ್ನುವುದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತ ನಾಳಗಳಿಗೆ ಸಂಬಂಧಿಸಿದ ಗುಣಪಡಿಸಲಾಗದ ಮತ್ತು ಮಾರಣಾಂತಿಕವಲ್ಲದ ರೋಗ. ಆಂಗ್ಲ ಭಾಷೆಯಲ್ಲಿ ಇದನ್ನು ‘ವೇರಿಕೋಸ್ ವೇನ್ಸ್’ ಎಂದು ಕರೆಯುತ್ತಾರೆ.

ಹೆಚ್ಚಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ, ಕೆಲವೊಮ್ಮೆ ತೊಡೆಗಳಲ್ಲಿ ಮತ್ತು ಹೊಟ್ಟೆ ಭಾಗದಲ್ಲಿಯೂ ಕಂಡು ಬರುತ್ತದೆ. ಕಾಲುಗಳಲ್ಲಿನ ರಕ್ತನಾಳಗಳು ಉಬ್ಬಿಕೊಂಡು ದಪ್ಪವಾಗಿ ಹಗ್ಗದಂತೆ ಕಾಣಿಸಿಕೊಂಡು ಕಾಲುಗಳ ಚರ್ಮದಲ್ಲಿ ಅಂಕುಡೊಂಕಾಗಿ ಜೇಡರ ಬಲೆಯಂತೆ ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿ ಯಾವುದೇ ನೋವು, ತುರಿಕೆ ಇಲ್ಲದ ಕಾರಣ ಹೆಚ್ಚಿನ ಜನರು ಈ ರೋಗವನ್ನು ನಿರ್ಲಕ್ಷ್ಯ ಮಾಡುತ್ತಾರೆ. ದೇಶದಲ್ಲಿ ವರ್ಷಕ್ಕೆ ಸುಮಾರು 10 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಾರೆ. ಪೂರ್ತಿಯಾಗಿ ಗುಣ ಪಡಿಸಲು ಸಾಧ್ಯವಿಲ್ಲದ ಈ ರೋಗವನ್ನು ವಿಶೇಷ ಪರೀಕ್ಷೆಗಳ ಅಗತ್ಯವಿಲ್ಲದೆ ಕಂಡು ಹಿಡಿಯಲು ಸಾಧ್ಯವಿದೆ. ಬಹಳ ವರ್ಷಗಳಿಂದ ಉಬ್ಬಿದ ರಕ್ತನಾಳಗಳಿದ್ದಲ್ಲಿ ಕೆಲವೊಮ್ಮೆ ಈ ರಕ್ತನಾಳಗಳೊಳಗೆ ರಕ್ತ ಹೆಪ್ಪುಗಟ್ಟಿ ಅತೀ ವಿರಳ ಸಂದರ್ಭಗಳಲ್ಲಿ ಮಾರಣಾಂತಿಕವಾಗುವ ಸಾಧ್ಯತೆ ಇದೆ. ಕಾಲುಗಳಲ್ಲಿ ವಿಪರೀತ ನೋವು, ರಕ್ತನಾಳಗಳ ಉರಿಯೂತ ಉಂಟಾಗುತ್ತದೆ. ಉಳಿದ ಎಲ್ಲ ಸಂದರ್ಭಗಳಲ್ಲಿ ಉಬ್ಬು ರಕ್ತನಾಳಗಳಲ್ಲಿ ಯಾವುದೇ ನೋವು ಇರಲ್ಲ. ಈ ಕಾರಣದಿಂದಲೇ ಹೆಚ್ಚು ಜನರು ಈ ರೋಗದ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಾರೆ.

ರೋಗದ ಲಕ್ಷಣಗಳು: ಕಾಲು ನೋವು, ಕಾಲುಗಳ ಸ್ನಾಯುಗಳ ಸೆಳೆತ ಮತ್ತು ಕಾಲುಗಳು ಭಾರವಾದಂತಾಗುವುದು, ಮುಂದುವರಿದ ಹಂತದಲ್ಲಿ ಕಾಲಿನ ಮೇಲ್ಭಾಗದಲ್ಲಿ ಚರ್ಮ ದಪ್ಪಗಾಗುವುದು, ಕಪ್ಪಾಗುತ್ತದೆ. ಚರ್ಮದಲ್ಲಿ ವಿಪರೀತ ತುರಿಕೆ ಇರುತ್ತದೆ. ಯಾವುದೇ ಸೂಕ್ತ ಚಿಕಿತ್ಸೆ ಪಡೆಯದೆ ಇದ್ದಲ್ಲಿ ಕೊನೆಯ ಹಂತದಲ್ಲಿ ಕಾಲುಗಳ ಚರ್ಮದಲ್ಲಿ ಗಾಯ ಆಗಿ ಮಾಯದ ಹುಣ್ಣು ಆಗುವುದು ಇತ್ಯಾದಿ ಲಕ್ಷಣಗಳು.

ತಡೆಗಟ್ಟುವುದು ಹೇಗೆ? ದೇಹದ ತೂಕದ ನಿಯಂತ್ರಣ, ಅತಿಯಾದ ದೇಹದ ತೂಕವಿದ್ದಲ್ಲಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಿಸಿ ಬೊಜ್ಜು ಕರಗಿಸಬೇಕು, ವ್ಯಾಯಾಮ, ದೈಹಿಕ ಕಸರತ್ತು ಇರುವ ಜೀವನ ಶೈಲಿ ಬಳಸತಕ್ಕದ್ದು, ಕೊಬ್ಬು ಜಾಸ್ತಿ ಇರುವ ಕರಿದ ತಿಂಡಿ ವರ್ಜಿಸಿ, ಹಸಿ ತರಕಾರಿ, ಹಣ್ಣು ಹಂಪಲು ಸೇವಿಸಿ ಆರೋಗ್ಯಪೂರ್ಣ ಜೀವನ ಪದ್ದತಿ ಅಳವಡಿಸಿಕೊಳ್ಳಬೇಕು.
ಎರಡು ಕಾರಣಗಳಿಂದ ಈ ಉಬ್ಬು ರಕ್ತನಾಳಗಳಿಗೆ ಚಿಕಿತ್ಸೆ ಅಗತ್ಯವಿದೆ. ಕೆಲವೊಮ್ಮೆ ಸೌಂದರ್ಯದ ಕಾರಣಕ್ಕಾಗಿ ಜನರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಯಾವುದೇ ನೋವು ತುರಿಕೆ ಇಲ್ಲದಿದ್ದರೂ ನೋಡಲು ಅಸಹ್ಯವಾಗಿ ಕಾಣುವ ಕಾರಣದಿಂದ ಚಿಕಿತ್ಸೆ ಮೊರೆ ಹೋಗುತ್ತಾರೆ.

ಶಸ್ತ್ರಚಿಕಿತ್ಸೆ ಹೊರತಾಗಿ ರಕ್ತನಾಳಗಳಲ್ಲಿ ಚುಚ್ಚು ಮದ್ದು ನೀಡಿ ಅವುಗಳು ಕುಗ್ಗಿ ಹೋಗುವಂತೆ ಮಾಡಲಾಗುತ್ತದೆ. ಲೇಸರ್ ಚಿಕಿತ್ಸೆ ನೀಡಿಯೂ, ಉಬ್ಬಿದ ರಕ್ತನಾಳವನ್ನು ಗುಣ ಪಡಿಸಬಹುದಾಗಿದೆ. ಆರಂಭಿಕ ಹಂತದಲ್ಲಿ ತುರಿಕೆ ಇದ್ದಾಗ ಸ್ಟಿರಾಯಡ್‌ ಔಷಧ ನೀಡಿ ತುರಿಕೆ ನಿಯಂತ್ರಿಸಬಹುದು. ಒಮ್ಮೆ ಹುಣ್ಣು ಆಗಿ ಗಾಯ ಉಲ್ಬಣವಾದ ಬಳಿಕ ಶಸ್ತ್ರ ಚಿಕಿತ್ಸೆ ಅನಿವಾರ್ಯ. ಶಸ್ತ್ರ ಚಿಕಿತ್ಸೆ ಜತೆಗೆ ಜೀವನ ಶೈಲಿ ಬದಲಾವಣೆ, ಆಹಾರ ಪದ್ಧತಿ ಬದಲಾವಣೆ ಮತ್ತು ಬೊಜ್ಜು ಕರಗಿಸುವಿಕೆ ಅತೀ ಅನಿವಾರ್ಯ ಎಂಬುದನ್ನು ರೋಗಿಗಳು ಮೊದಲು ತಿಳಿದುಕೊಂಡಲ್ಲಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ.

ವೆರಿಕೋಸ್ ವೇನ್ಸ್ ಕ್ಷಯಿಸುವಿಕೆ ಎನ್ನುವುದು ಒಂದು ಹೊಸ ರೀತಿ ಶಸ್ತ್ರಚಿಕಿತ್ಸೆ ಕ್ರಮ. ಆಂಗ್ಲ ಭಾಷೆಯಲ್ಲಿ ಅಬ್ಲೋಷನ್ ಥೆರಫಿ ಎನ್ನುತ್ತಾರೆ. ಇದು ಕನಿಷ್ಠ ಆಕ್ರಮಣಶೀಲ, ಆತ್ಯಾಧುನಿಕ ಮತ್ತು ಸಾಮಾನ್ಯ ನಿದ್ರಾಜನಕ ಅರಿವಳಿಕೆ ಔಷಧಿಗಳು ಅಗತ್ಯವಿಲ್ಲದ ಶಸ್ತ್ರ ಚಿಕಿತ್ಸೆ ಕ್ರಮ. ಸ್ಥಳೀಯ ಅರಿವಳಿಕೆ ಸಹಾಯದಿಂದ ರೋಗಿ ಮೂರ್ಚೆ ತಪ್ಪಿಸದೆ ಈ ಚಿಕಿತ್ಸೆ ನೀಡಲಾಗುತ್ತದೆ. ನುರಿತ ವೈದ್ಯರು ತೆಳುವಾದ ಕೊಳವೆ (ಕ್ಯಾಥೆಟರ್) ರಕ್ತನಾಳದಲ್ಲಿ ಅಳವಡಿಸಿ ಲೇಸರ್‌ಗಳ ಬೆಳಕಿನ ಕಿರಣಗಳ ಸಹಾಯದಿಂದ ಉಬ್ಬಿಹೋದ ರಕ್ತನಾಳಗಳ ಅಸಮರ್ಥ ಕವಾಟಗಳನ್ನು ಮುಚ್ಚಿ ಬಿಡುತ್ತಾರೆ. ಹೀಗೆ ಮಾಡಿದಾಗ ರಕ್ತನಾಳಗಳಲ್ಲಿ ಹೆಚ್ಚು ರಕ್ತ ಶೇಖರಣೆ ಆಗುವುದು ತಪ್ಪಿ ಹೋಗಿ ಉಬ್ಬಿದ ರಕ್ತನಾಳಗಳು ಕುಗ್ಗುತ್ತವೆ. ರೋಗ ಪೀಡಿತ ರಕ್ತನಾಳಗಳ ಕ್ಷಯಿಸುವಿಕೆಯಿಂದ ಆರೋಗ್ಯ ಪೂರ್ಣ ರಕ್ತನಾಳಗಳ ಮೇಲೆ ತಗಲುವ ಭಾರ ಅಥವಾ ಒತ್ತಡ ಕಡಿಮೆಯಾಗಿ, ಅವುಗಳು ಸರಿಯಾಗಿ ಕೆಲಸ ಮಾಡಲು ಆರಂಭಿಸುತ್ತದೆ. ಈ ಚಿಕಿತ್ಸೆ ಶೇ 95 ರಷ್ಟು ಯಶಸ್ಸು ಸಿಗುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT