ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೊರತೆ ನೀಗಿಸಿದ ‘ಪುಸ್ತಕ ಬ್ಯಾಂಕ್’

ಹಳೆ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಿಸಿದ ಶಿಕ್ಷಕರು
Last Updated 1 ಜೂನ್ 2022, 4:17 IST
ಅಕ್ಷರ ಗಾತ್ರ

ಮಂಗಳೂರು: ಶೈಕ್ಷಣಿಕ ವರ್ಷ ಆರಂಭವಾಗಿ 15 ದಿನಗಳು ಕಳೆದರೂ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪೂರ್ಣ ಪ್ರಮಾಣದ ಪುಸ್ತಕಗಳು ಪೂರೈಕೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಬೇಡಿಕೆಯಲ್ಲಿ ಶೇ 46ರಷ್ಟು ಪುಸ್ತಕಗಳು ಮಾತ್ರ ಸರಬರಾಜಾಗಿವೆ. ಆದರೆ, ಪುಸ್ತಕ ಬ್ಯಾಂಕ್, ಪಠ್ಯಪುಸ್ತಕಗಳ ಕೊರತೆಯನ್ನು ತಾತ್ಕಾಲಿಕವಾಗಿ ನೀಗಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿವರೆಗಿನ ಮಕ್ಕಳು ಪರೀಕ್ಷೆ ಪೂರ್ಣಗೊಳಿಸಿದ ಮೇಲೆ ಅವರಿಂದ ಪಠ್ಯಪುಸ್ತಕಗಳನ್ನು ಸಂಗ್ರಹಿಸುತ್ತದೆ. ಶಾಲೆ ಪುನರಾರಂಭಗೊಂಡ ನಂತರ ಹೊಸ ಪುಸ್ತಕ ಬರುವವರೆಗೆ ಶಾಲೆಯಲ್ಲಿ ಸಂಗ್ರಹವಿರುವ ಪುಸ್ತಕಗಳನ್ನು ಆಯಾ ತರಗತಿಯ ಮಕ್ಕಳಿಗೆ ನೀಡಲಾಗುತ್ತದೆ. ಇದರಿಂದ ಶಾಲೆ ಆರಂಭವಾದ ಮೊದಲ ದಿನವೇ ಮಕ್ಕಳ ಕೈಗೆ ಪಠ್ಯಪುಸ್ತಕ ದೊರೆಯುತ್ತದೆ.

‘ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪುಸ್ತಕ ಬ್ಯಾಂಕ್ ಮಾಡುವ ಕ್ರಮ ಪ್ರಾರಂಭಿಸಲಾಗಿದೆ. ಕೊನೆಯ ಪರೀಕ್ಷೆ ಮುಗಿದ ಮೇಲೆ ಸಮುದಾಯದತ್ತ ಶಾಲೆ ಆರಂಭಕ್ಕೆ ಪೂರ್ವದಲ್ಲಿ ವಿಷಯವಾರು ಶಿಕ್ಷಕರು, ಆಯಾ ತರಗತಿಯ ಮಕ್ಕಳಿಂದ ಪುಸ್ತಕಗಳನ್ನು ಪಡೆದು ಜತನದಿಂದ ಸಂಗ್ರಹಿಸಿಡುತ್ತಾರೆ’ ಎನ್ನುತ್ತಾರೆ ಡಿಡಿಪಿಐ ಸುಧಾಕರ್ ಕೆ.

‘ಜಿಲ್ಲೆಯಲ್ಲಿ ಒಂದರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಇದ್ದಾರೆ. ಎಲ್ಲ ಮಕ್ಕಳ ಕೈಗೂ ಈಗ ಪುಸ್ತಕ ದೊರೆತಿದೆ. ಸರ್ಕಾರದಿಂದ ಬಂದಿರುವ ಶೇ 46ರಷ್ಟು ಹೊಸ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಮಿಕ್ಕಿದ ಶೇ 54ರಷ್ಟು ಬೇಡಿಕೆಯನ್ನು ಪುಸ್ತಕ ಬ್ಯಾಂಕ್ ಪೂರೈಸಿದೆ. ಬೇರೆ ಬೇರೆ ತಾಲ್ಲೂಕುಗಳಿಗೆ ಬೇರೆ ಬೇರೆ ವಿಷಯ ಬಾಕಿ ಇದೆ. ಪುಸ್ತಕಗಳು ನೇರವಾಗಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬರುತ್ತವೆ. ಅಲ್ಲಿಂದ ಶಾಲೆಗಳಿಗೆ ಪೂರೈಕೆಯಾಗುತ್ತದೆ’ ಎಂದು ಅವರು ವಿವರಿಸಿದರು.

ಬೇರೆ ಬೇರೆ ತಾಲ್ಲೂಕುಗಳಿಗೆ ಪೂರೈಕೆಯಾಗುವ ಪುಸ್ತಕಗಳು ಭಿನ್ನವಾಗಿವೆ. ಕೆಲವು ತಾಲ್ಲೂಕುಗಳಿಗೆ ಕೆಲವು ವಿಷಯಗಳ ಪುಸ್ತಕ ಪೂರೈಕೆ ಬಾಕಿ ಇದೆ. ಬೇಡಿಕೆ ಸಲ್ಲಿಸಿರುವ ಒಟ್ಟು ಪಠ್ಯಪುಸ್ತಕಗಳಲ್ಲಿ ಇನ್ನು 9.13 ಲಕ್ಷ ಪುಸ್ತಕಗಳು ಬರಲು ಬಾಕಿ ಇವೆ. ಖಾಸಗಿ ಶಾಲೆಗಳು ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಿ, ಹಣ ಪಾವತಿಸಿ ಪುಸ್ತಕಗಳನ್ನು ಪಡೆದುಕೊಳ್ಳುತ್ತವೆ ಎಂದು ವಿವರಿಸಿದರು.

‘ಶಾಲೆ ಶುರುವಾದ ಮೊದಲ ದಿನವೇ ನಮಗೆ ಎಲ್ಲ ವಿಷಯಗಳ ಪುಸ್ತಕಗಳನ್ನು ಕೊಟ್ಟಿದ್ದಾರೆ. ಆದರೆ, ಸಮವಸ್ತ್ರ ಮಾತ್ರ ದೊರೆತಿಲ್ಲ. ಹಳೆಯ ಸಮವಸ್ತ್ರವನ್ನೇ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೇನೆ’ ಎಂದು ಬಿಜೈನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಹೇಳಿದಳು.

ಪೂರೈಕೆ ಆಗದ ಸಮವಸ್ತ್ರ
ಶಾಲೆಗಳು ಆರಂಭವಾಗಿ 15 ದಿನಗಳು ಕಳೆದರೂ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಯಾಗಿಲ್ಲ. ಕಳೆದ ವರ್ಷ ಕೊರೊನಾ ಕಾರಣಕ್ಕೆ ಶಾಲೆಗಳು ನಡೆಯದೆ, ಸಮವಸ್ತ್ರ ಕೂಡ ವಿತರಣೆ ಆಗಿರಲಿಲ್ಲ. ಈ ವರ್ಷ ಸಮವಸ್ತ್ರ ವಿತರಣೆ ವಿಳಂಬದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ. ‘ಜಿಲ್ಲೆಗೆ ಸಮವಸ್ತ್ರ ಪೂರೈಕೆ ಆಗಿಲ್ಲ. ಸರ್ಕಾರದಿಂದ ಶೀಘ್ರ ಬರುವ ಭರವಸೆ ಇದೆ’ ಎಂದು ಡಿಡಿಪಿಐ ಸುಧಾಕರ್ ಕೆ. ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT