ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯೆ ಒಂದೇ ಆಗಿರಲಿ

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವೀರಶೈವ ಧರ್ಮ ಅರ್ವಾಚೀನವಾದರೆ, ಆ ಧರ್ಮದ ಆರಾಧ್ಯ ದೇವನಾದ ಪರಶಿವನು ಪ್ರಾಚೀನನು. ಆ ಶಿವನಿಗೂ ಜೈನಧರ್ಮದ ವೃಷಭದೇವನಿಗೂ ಹಲವು ವಿಷಯಗಳಲ್ಲಿ ಆಶ್ಚರ್ಯಕರವಾದ ಸಾಮ್ಯಗಳಿವೆ.

ಶಿವ ಆದಿ ದೇವನಾದರೆ, ವೃಷಭನಾಥ ಆದಿ ತೀರ್ಥಂಕರ. ಶಿವನ ನಿವಾಸ ಕೈಲಾಸವಾದರೆ, ವೃಷಭದೇವನ ನಿರ್ವಾಣ ಸ್ಥಳ ಕೈಲಾಸಗಿರಿ. ಶಿವನ ವಾಹನ ಎತ್ತು ಆದರೆ, ವೃಷಭನ ಲಾಂಛನ ಎತ್ತು. ಇಬ್ಬರೂ ವೃಷಭಧ್ವಜರು. ವೃಷಭದೇವ ದಿಗಂಬರನಾದರೆ, ಶಿವನು ಸಹ ದಿಗಂಬರನೆಂದು ಕೀರ್ತಿತನಾಗಿದ್ದಾನೆ. ವೃಷಭನಾಥರ ಪರಂಪರೆಯ ಜೈನಧರ್ಮ, ‘ಅಹಿಂಸಾ ಪರಮೋ ಧರ್ಮಃ’- ಎಂದು ಸಾರಿದರೆ, ಶಿವನನ್ನು ಆರಾಧಿಸುವ ವೀರಶೈವ ಧರ್ಮ, ‘ದಯವೇ ಧರ್ಮದ ಮೂಲವಯ್ಯ’ - ಎನ್ನುವುದು.

ವೀರಶೈವ ಧರ್ಮದ ಭಾಷೆ ಕನ್ನಡವಾದರೆ; ಕನ್ನಡವನ್ನೇ ಕರ್ನಾಟಕದ ಜೈನರು ಧರ್ಮಭಾಷೆಯನ್ನಾಗಿ ಮಾಡಿಕೊಂಡು ಆದ್ಯ ಮಹಾಕವಿಗಳಾದರು. ಎರಡು ಧರ್ಮದವರೂ ಪ್ರಾಣಿಬಲಿಯ ವಿರೋಧಿಗಳು. ಇಬ್ಬರೂ ಸಸ್ಯಾಹಾರಿಗಳು.

ವೀರಶೈವರು ಶರಣರಾದರೆ, ಜೈನ ಮುನಿಗಳು ಶ್ರಮಣರು. ಶ್ರಮಣರು ತಪಸ್ಸಿನಲ್ಲಿ ಶ್ರಮವಹಿಸಿದರೆ, ಶರಣರು ಬಾಳಿನಲ್ಲಿ ಕಾಯಕವೇ ಕೈಲಾಸವೆಂದರು. ವೀರಶೈವ ಧರ್ಮದ ಗುರಿ, ಜೀವಾತ್ಮನು ಈಶ್ವರನಲ್ಲಿ ಐಕ್ಯವಾಗುವುದಾದರೆ; ಜೈನಧರ್ಮದ ಗುರಿ, ಜೀವಾತ್ಮನು ಸ್ವ-ಪ್ರಯತ್ನದಿಂದ ಪರಮಾತ್ಮನಾಗುವುದು.

ವೃಷಭನಾಥರಿಂದ ಮಹಾವೀರರ ವರೆಗೆ ಎಲ್ಲ ಇಪ್ಪತ್ನಾಲ್ಕು ತೀರ್ಥಂಕರರು ಉತ್ತರಾ ಪಥದವರಾದರೆ, ವೀರಶೈವ ಧರ್ಮದ ಪ್ರಧಾನ ಪುರುಷ ಬಸವಣ್ಣನವರು ದಕ್ಷಿಣಾ ಪಥದ ಕರ್ನಾಟಕದವರು. ಮಹಾವೀರರು ಬೋಧಿಸಿದುದು ಜನಭಾಷೆಯಾದ ಪ್ರಾಕೃತದಲ್ಲಿ. ಬಸವಣ್ಣನವರ ಬೋಧನೆ ಇರುವುದು ಜನಭಾಷೆಯಾದ ಸರಳ ಕನ್ನಡದಲ್ಲಿ. ಇಬ್ಬರೂ ಜನಮುಖಿಯಾದವರು. ಇಬ್ಬರೂ ಶ್ರೀಸಾಮಾನ್ಯರ ಧಾರ್ಮಿಕೋದ್ಧಾರ ಬಯಸಿದವರು. ‘ಧರ್ಮ ಯಾವುದೇ ಇರಲಿ, ದಯೆ ಒಂದೇ ಆಗಿರಲಿ’ - ಎಂಬ ಸಂತಕವಿ ಬಾಬಾರ ಆಶಯ ಎರಡೂ ಧರ್ಮದಲ್ಲೂ ಸ್ಥಿರವಾಗಿದೆ.

ಪ್ರಥಮ ತೀರ್ಥಂಕರ ವೃಷಭನಾಥರ ದ್ವಿತೀಯ ಸುಪುತ್ರನೇ ಭಗವಾನ್ ಬಾಹುಬಲಿ. ಈತನ ಮಹೋನ್ನತ ಪ್ರತಿಮೆಗೇ ಈ ತಿಂಗಳು ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಜರುಗಲಿದೆ. ಈ ಮಹಾತ್ಮನೂ ತನ್ನ ತಂದೆಯಂತೆ ಅಹಿಂಸೆಯ ಪ್ರತಿಪಾದಕ. ವಿಂಧ್ಯಗಿರಿಯ ಶಿಖರದಲ್ಲಿ ನಿಂತು ಇಡೀ ಜಗತ್ತಿಗೆ ‘ಕೊಲಲಾಗದು’ ಎಂಬ ಸಂದೇಶವನ್ನು ಸಾರುತ್ತಿದ್ದಾನೆ. ‘ಕೊಲೆ, ಸುಳ್ಳು, ಕಳವು, ಬೇರೆ ಹೆಂಗಸರ ಸಂಗ, ಅತಿಸಂಗ್ರಹದ ಆಸೆ - ಇವು ಸಮ್ಮತವಾಗ ತಕ್ಕದ್ದಲ್ಲ. ಈ ಪಾಪಗಳಿಂದ ಅಕಾರ್ಯವಾದರೆ, ಇಹ-ಪರ ಲೋಕಗಳಲ್ಲಿ ಕೇಡಾಗುವುದು - ಎಂಬುದಾಗಿ ಅಷ್ಟು ಎತ್ತರದಲ್ಲಿ ಇದ್ದುಕೊಂಡು ವಿಶ್ವಕ್ಕೆಲ್ಲ ಘೋಷಿಸುವಂತೆ ಶ್ರೀಗೊಮ್ಮಟ ದೇವನು ಕಂಗೊಳಿಸುತ್ತಿದ್ದಾನೆ. ಇಂಥ ದೇವನನ್ನು ಈಕ್ಷಿಸೈ’ - ಎಂದು ಕವಿ ಬೊಪ್ಪಣ ಪಂಡಿತನು ಹಾಡಿ ಹೊಗಳಿದ್ದಾನೆ. ಜೈ ಗೊಮ್ಮಟೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT