ಸೋಮವಾರ, ನವೆಂಬರ್ 18, 2019
27 °C
ಬಿಎಸ್‌ಎನ್‌ಎಲ್‌ ಗುತ್ತಿಗೆ ಕಾರ್ಮಿಕರಿಂದ ಪ್ರತಿಭಟನೆ

8 ತಿಂಗಳ ವೇತನ ನೀಡಲು ಒತ್ತಾಯ

Published:
Updated:
Prajavani

ಮಂಗಳೂರು: ಬಿಎಸ್‍ಎನ್‍ಎಲ್ ಗುತ್ತಿಗೆ ಕಾರ್ಮಿಕರ 8 ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಮಂಗಳವಾರ ಕದ್ರಿಯ ಕೇಂದ್ರ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಾಯಿತು.

ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಘಟಕದ ಉಪಾಧ್ಯಕ್ಷ ವಸಂತ ಆಚಾರಿ, ‘ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಬಿಎಸ್‍ಎನ್‍ಎಲ್ ಎಂಬ ಸಾರ್ವಜನಿಕ ಉದ್ದಿಮೆ ಕುಸಿಯುತ್ತಿದೆ. ಜನರ ಸೇವೆ ನಿರ್ವಹಿಸಬೇಕಾದಂತಹ ಬಿಎಸ್‍ಎನ್‍ಎಲ್ ಹಲವಾರು ಸಮಸ್ಯೆಗಳಿಂದಾಗಿ ನಲುಗಿ ಹೋಗುವಂತಾಗಿದೆ. ಕೇಂದ್ರ ಸರ್ಕಾರ ಖಾಸಗಿ ರಂಗಕ್ಕೆ ಆದ್ಯತೆ ಕೊಡುವ ನೀತಿಯು ಅಪಾಯಕಾರಿಯಾಗಿದೆ ಎಂದು ದೂರಿದರು.

ಬಿಎಸ್‍ಎನ್‍ಎಲ್ ಆಡಳಿತ ಕಚೇರಿಗಳು ಮತ್ತು ಎಕ್ಸ್‌ಚೇಂಜ್‌ಗಳಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ 2018 ರ ಅಕ್ಟೋಬರ್‌ನಿಂದ ಮಾಸಿಕ ವೇತನ ಇಲ್ಲದೇ ಪರದಾಡುವಂತಾಗಿದೆ. ಗುತ್ತಿಗೆ ಕಾರ್ಮಿಕರು ಸಾಲದ ಕೂಪಕ್ಕೆ ಬೀಳುವಂತಾಗಿದೆ ಎಂದು ತಿಳಿಸಿದರು.

ಬಿಎಸ್‍ಎನ್‍ಎಲ್ ಆಡಳಿತ ವರ್ಗ, ಗುತ್ತಿಗೆದಾರರು ಮತ್ತು ಕಾರ್ಮಿಕ ಇಲಾಖೆಗಳು, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ಖಂಡನೀಯ. ಇನ್ನಾದರೂ ಕೂಡಲೇ ಗುತ್ತಿಗೆ ಕಾರ್ಮಿಕರ ಬಾಕಿ ಇರುವ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಂದಾಳು ವಾಸುದೇವ ಉಚ್ಚಿಲ್ ಮಾತನಾಡಿದರು.

ಆಡಳಿತದಾರರು, ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿ, ವೇತನ ಪಾವತಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುಂದು ಎಂದು ಕೇಂದ್ರ ಸಹಾಯಕ ಕಾರ್ಮಿಕ ಆಯುಕ್ತರು ಭರವಸೆ ನೀಡಿದರು.

ಪದಾಧಿಕಾರಿಗಳಾದ ಉದಯ ಕುಮಾರ್, ಮೋಹನ್, ನಿತ್ಯಾನಂದ ಬಿ, ಸುನಿಲ್, ಹನೀಫ್, ದಿನೇಶ್, ಸುಬ್ಬಯ್ಯ, ಶೀನಪ್ಪ, ಸತೀಶ, ರಮೇಶ್, ಚಿತ್ತರಂಜನ್ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)