ಬುಧವಾರ, ಆಗಸ್ಟ್ 10, 2022
20 °C

`ಕ್ಯಾಂಪ್ಕೊ ಆನ್ ವೀಲ್ಸ್' ಯೋಜನೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ಇಲ್ಲಿನ ಕಾವಿನಲ್ಲಿರುವ ಕ್ಯಾಂಪ್ಕೊದ ಮಾಸ್ಟರ್ ಗೋಡೌನ್‍ನಲ್ಲಿ ಮಂಗಳವಾರ ‘ಕ್ಯಾಂಪ್ಕೊ ಆನ್ ವ್ಹೀಲ್’ ಯೋಜನೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು.

‘ಆಮ್ಲಜನಕದ ಅವಶ್ಯಕತೆ ಇಂದು ನಮ್ಮ ಅರಿವಿಗೆ ಬರುತ್ತಿದೆ. ಕರಾವಳಿಯ ಕೃಷಿಕರ ಪಾಲಿಗೆ ಕ್ಯಾಂಪ್ಕೊ ಆಮ್ಲಜನಕದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಕ್ಯಾಂಪ್ಕೊ ನಂಬಿಕೆಯ ತಳಹದಿಯಲ್ಲಿ ಕೆಲಸ ಮಾಡುತ್ತಿದೆ. ನಂಬಿಕೆಯೇ ಇಲ್ಲಿನ ಪ್ರಮುಖ ಶಕ್ತಿ’ ಎಂದರು.

‘ಕ್ಯಾಂಪ್ಕೊ ಆನ್ ವೀಲ್ಸ್’ ಎಂಬ ಯೋಜನೆಯನ್ನು ಜಾರಿಗೆ ತರುವ ಮೂಲಕ, ಮತ್ತೊಮ್ಮೆ ಗ್ರಾಹಕರಿಗೆ ಅನುಕೂಲ ಮಾಡಲು ಕ್ಯಾಂಪ್ಕೊ ಮುಂದಾಗಿದೆ. ಜನಹಿತಕ್ಕಾಗಿ ಕೆಲಸ ಮಾಡುವ ಸಂಸ್ಥೆ ಇದಾಗಿದೆ’ ಎಂದರು.

ಕ್ಯಾಂಪ್ಕೊ ನಿಕಟಪೂರ್ವ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮಾತನಾಡಿ, ‘400 ವರ್ಷಗಳ ಹಿಂದೆ ರಾಣಿ ಅಬ್ಬಕ್ಕ ಕಾಳುಮೆಣಸು ವ್ಯಾಪಾರ ನಡೆಸಿರುವುದನ್ನು ಇತಿಹಾಸ ತಿಳಿಸುತ್ತದೆ. ಇಂದು ಕ್ಯಾಂಪ್ಕೊ ಕೂಡ ಇದೇ ದಿಶೆಯಲ್ಲಿ ಮುನ್ನಡೆಯುತ್ತಿದೆ. ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತಿದೆ. ತನ್ನ ಸಾಮಾಜಿಕ ಬದ್ಧತೆಯ ಭಾಗವಾಗಿ ಆಕ್ಸಿಜನ್ ಪ್ಲಾಂಟ್, ಬ್ಲಡ್ ಬ್ಯಾಂಕ್, ಪ್ರವಾಹ ಸಂದರ್ಭದಲ್ಲಿ ಮನೆ ನಿರ್ಮಾಣದಂತಹ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಲಾಕ್‍ಡೌನ್ ಸಂದರ್ಭ ಹೊರಗಡೆ ಹೋದರೆ ಪೊಲೀಸರು ತಡೆಯುತ್ತಾರೆ, ಅಡಿಕೆಯನ್ನು ಮಾರುಕಟ್ಟೆಗೆ ಸಾಗಿಸಲು ಜನವಿಲ್ಲ ಎಂಬಂತಹ ಪರಿಸ್ಥಿತಿಯಿದೆ. ಈ ಸಂದರ್ಭ ಕ್ಯಾಂಪ್ಕೊ ರೈತರ ಮನೆ ಬಾಗಿಲಿಗೆ ತೆರಳುವ ಮೂಲಕ ಲಾಕ್‍ಡೌನ್ ಸಂದರ್ಭ ಸಂಕಷ್ಟಕ್ಕೆ ಒಳಗಾದ ರೈತರ ನೆರವಿಗೆ ಧಾವಿಸುತ್ತಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕೊಡ್ಗಿ ಮಾತನಾಡಿ, ‘ಕ್ಯಾಂಪ್ಕೊ ಆನ್ ವೀಲ್ಸ್ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಖಂಡಿತಾ ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ’ ಎಂದರು.

ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಮಾರುಕಟ್ಟೆ ವಿಭಾಗದ ಮುಖ್ಯ ವ್ಯವಸ್ಥಾಪಕ ಗೋವಿಂದ ಭಟ್ ವಂದಿಸಿದರು. ಸಿಬ್ಬಂದಿ ನಿತಿನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಮಂಗಳವಾರ ಈ ಮಾಸ್ಟರ್ ಗೋಡೌನ್ ಅನ್ನು ಸೇವೆ ಮುಕ್ತಗೊಳಿಸಲಾಯಿತು.  ಸೋಮವಾರ ರಾತ್ರಿ ಶಾಸಕ ಸಂಜೀವ ಮಠಂದೂರು, ಆರ್‍ಎಸ್‍ಎಸ್ ಹಿರಿಯ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಆರ್‍ಎಸ್‍ಎಸ್‍ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್., ಆರ್‍ಎಸ್‍ಎಸ್‍ನ ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮುಖಂಡರಾದ ನಾ. ಸೀತಾರಾಮ್ ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು